ಮಿಲಿಟರಿ ಪೊಲೀಸ್ ಪಡೆಯಲ್ಲಿ ಮಹಿಳೆಯರ ನೇಮಕಾತಿ: ನಿರ್ಮಲ ಚೊಚ್ಚಲ ನಿರ್ಧಾರ

ಹೊಸದಿಲ್ಲಿ: ನಿರ್ಮಲಾ ಸೀತಾರಾಮನ್ ಅವರು ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಮಿಲಿಟರಿ ಪೊಲೀಸ್ ಪಡೆಗೆ ಮಹಿಳಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ.
ಮೊದಲ ರಕ್ಷಣಾ ಸಚಿವೆಯಾಗಿ ನೇಮಕವಾದ ದಿನವೇ ಈ ಬಗ್ಗೆ ಮಾತನಾಡಿದ್ದ ನಿರ್ಮಲಾ ಸೀತಾರಾಮನ್ ಅವರು ಯುದ್ಧಪಡೆಗಳಿಗೆ ಮಹಿಳೆಯರ ನೇಮಕ ಮಾಡಿಕೊಳ್ಳಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಇದೀಗ ಅಧಿಕೃತವಾಗಿ ಮಹಿಳಾ ಸಿಬ್ಬಂದಿ ನೇಮಕಾತಿಗೆ ಒಪ್ಪಿಗೆ ದೊರಕಿದ್ದು, ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
೮೦೦ ಮಹಿಳಾ ಸಿಬ್ಬಂದಿ ನೇಮಕ
ಗ್ರೆನೇಡ್ ಬ್ಯಾರಿಯರ್ ಫೋರ್ಸ್‌ನಲ್ಲಿಯೂ ಕೂಡ ಮಹಿಳೆಯರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಮಹತ್ವದ ಹೆಜ್ಜೆಯನ್ನು ಇರಿಸಲಾಗಿದೆ. ವಾರ್ಷಿಕವಾಗಿ 52 ಮಹಿಳೆಯರ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಒಟ್ಟು 800 ಮಹಿಳೆಯರನ್ನು ಮಿಲಿಟರಿ ಪೊಲೀಸ್ ಪಡೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಲೆ. ಜನರಲ್ ಅಶ್ವಿನ್ ಕುಮಾರ್ ತಿಳಿಸಿದ್ದಾರೆ.
ನಿಯಮ ನಿಬಂಧನೆಗಳ ಉಲ್ಲಂಘನೆ ತಡೆಯುವುದು, ಶಾಂತಿ, ಯುದ್ಧದ ಸಮಯದಲ್ಲಿ ಅಲ್ಲದೇ ಸೈನಿಕರ ಚಲನವಲನ ನಿರ್ವಹಣೆ, ಯುದ್ಧ ಕೈದಿಗಳ ನಿರ್ವಹಣೆ ಹಾಗೂ ನಾಗರಿಕ ಪೊಲೀಸರಿಗೆ ನೆರವು ನೀಡುವ ಕಾರ್ಯವನ್ನು ಮಿಲಿಟರಿ ಪೊಲೀಸರು ನಡೆಸುತ್ತಾರೆ.

LEAVE A REPLY