ಮಾನವೀಯತೆ, ಸ್ವಚ್ಛತಾ ಕಾಳಜಿ ಮೂಲಕ ಮಾದರಿಯಾದ ಹೋರಾಟ: ಮಂಗ್ಳೂರ್ ಛೊಲೋ ಆತ್ರಿ!

ಮಂಗಳೂರು: ಕ್ಷಣ ಕ್ಷಣಕ್ಕೂ ಕಾವೇರುತ್ತಿದ್ದ ಪರಿಸ್ಥಿತಿ.. ಏನೇ ಆಗಲಿ ನಾವು ಬೈಕ್ ರ್‍ಯಾಲಿ ನಡೆಸಿಯೇ ಸಿದ್ದ ಎಂದು ಪಣತೊಟ್ಟಿದ್ದ ಯುವ ಪಡೆ… ರಾಜ್ಯ ಮುಖಂಡರಿಂದ ಕಾಂಗ್ರೆಸ್ ಸರ್ಕಾರ, ಸಿಎಂ ಸಿದ್ದರಾಮಯ್ಯ, ಸಚಿವ ರಮಾನಾಥ ರೈ, ಯು.ಟಿ. ಖಾದರ್ ವಿರುದ್ಧ ವಾಗ್ಭಾಣ… ಸರ್ಕಾರ, ಪೊಲೀಸರ ಹಠದ ತಡೆಗೆ ಬಗ್ಗದೆ ಬೈಕ್ ರ್‍ಯಾಲಿ, ಮೆರವಣಿಗೆ ನಡೆಸಿದ ಬಿಜೆಪಿಯ ಅರ್ಪಣಾ ಮನೋಭಾವದ ಕಾರ್ಯಕರ್ತರು…
ಇದು ಮಂಗಳೂರಿನ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಕಂಡುಬಂದ ದೃಶ್ಯ. ಬಿಜೆಪಿ ಯುವ ಮೋರ್ಚಾ ವತಿಯಿಂದ ಆಯೋಜಿಸಿದ ಮಂಗಳೂರು ಚಲೋ ಬೈಕ್ ರ್‍ಯಾಲಿ ನಿರ್ಬಂಧದ ನಡುವೆಯೂ ಯಶಸ್ವಿ ಯಾಯಿತು. ಬಿಜೆಪಿ ಮುಂದಿಟ್ಟ ಮೂರು ಬೇಡಿಕೆ ಈಡೇರುವವರೆಗೆ ರಾಜ್ಯಾದ್ಯಂತ ಹೋರಾಟ ಮತ್ತು ಮುಂದಿನ ಚುನಾವಣೆ ಗೆಲ್ಲುವ ಶಪಥ ರ್‍ಯಾಲಿ ಮೂಲಕ ಹೊರ ಹೊಮ್ಮಿತು. ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಕರ್ತರ ಮಾನವೀಯತೆ, ಸ್ವಚ್ಛತಾ ಕಾಳಜಿ, ಉತ್ಸಾಹ ಕಂಡು ಹೊರಜಿಲ್ಲೆಗಳ ಕಾರ್ಯಕರ್ತರು ದಿಟ್ಟತನದಿಂದ ಪೊಲೀಸರನ್ನು ಎದುರಿಸಿದರು. ‘ರ್‍ಯಾಲಿ ಛೋಲೋ ಆತ್ರಿ’ ಎಂದು ಖುಷಿಪಟ್ಟರು.
ಗೆಲುವಿನ ನಗೆ ಬೀರಿದ ಬಿಜೆಪಿ
ರ್‍ಯಾಲಿ ನಡೆಸಲು ನಾವು ಬಿಡೆವು ಎಂದು ಕಾಂಗ್ರೆಸ್ ಸರ್ಕಾರ ಮತ್ತು ಅವರ ಆದೇಶದಂತೆ ಪೊಲೀಸರು ಕ್ಷಿಪ್ರ ಕಾರ್ಯಪಡೆ ಕರೆಸಿ, ಬೆದರಿಕೆ ಒಡ್ಡಿ, ಹಲ್ಲೆ ನಡೆಸಿದರೂ ಕುಗ್ಗದ ಬಿಜೆಪಿ ಕಾರ್ಯಕರ್ತರು ಯೋಜಿತ ತಂತ್ರ ಮೂಲಕ ಬೈಕ್ ರ್‍ಯಾಲಿ, ಪ್ರತಿಭಟನೆ ನಡೆಸಿ ಗೆಲುವಿನ ನಗೆ ಬೀರಿದರು. ರ್‍ಯಾಲಿ ನಡೆಯಲೇ ಬಾರದು ಎಂದು ಪೊಲೀಸರು ಹೂಡಿದ ವ್ಯೂಹ ಬಿಜೆಪಿ ಕಾರ್ಯಕರ್ತರ ಬದ್ದತೆ ಎದುರು ಶರಣಾಯಿತು. ಆರು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದರು.
ಪುತ್ತೂರಿನಿಂದ 2 ಸಾವಿರ ಕಾರ್ಯಕರ್ತರು
ಮಂಗಳೂರಿನಲ್ಲಿ ಗುರುವಾರ ನಡೆದ ಮಂಗಳೂರು ಚಲೋ ಬಿಜೆಪಿ ಪ್ರತಿಭಟನೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದ ೨ ಸಾವಿರ ಕಾರ್ಯಕರ್ತರು ಪಾಲ್ಗೊಂಡಿದ್ದರು. ಗುರುವಾರ ಬೆಳಗ್ಗೆ ಪುತ್ತೂರಿನಿಂದ ರೈಲುಗಳಲ್ಲಿ ವಿಟ್ಲ ಮತ್ತು ಉಪ್ಪಿನಂಗಡಿಯಿಂದ ಬಸ್ಸುಗಳಲ್ಲಿ ಹಾಗೂ ಖಾಸಗಿ ವಾಹನಗಳಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಮಂಗಳೂರಿಗೆ ತೆರಳಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪ್ರಮುಖರಾದ ಗೋಪಾಲಕೃಷ್ಣ ಹೇರಳೆ, ಡಿ. ಶಂಭು ಭಟ್, ಪುಯಿಲ ಕೇಶವ ಗೌಡ, ಕೆ. ಜೀವಂಧರ ಜೈನ್, ಜಿಲ್ಲಾ ಬಿಜೆಪಿ ಸಮಿತಿ ಸದಸ್ಯ ಕೆ.ಎಸ್. ಅಶೋಕ್ ಕುಮಾರ್ ರೈ, ಮಾಜಿ ಶಾಸಕಿ ಮಲ್ಲಿಕಾಪ್ರಸಾದ್, ವಿದ್ಯಾ ಆರ್. ಗೌರಿ, ಗೌರಿ ಬನ್ನೂರು, ಶಿವರಂಜನ್, ಅನೀಶ್ ಬಡೆಕ್ಕಿಲ, ಸುನೀಲ್ ದಡ್ಡು, ಚಂದ್ರಶೇಖರ್ ರಾವ್ ಬಪ್ಪಳಿಗೆ, ಸುರೇಶ್ ಆಳ್ವ, ಬೂಡಿಯಾರು ರಾಧಾಕೃಷ್ಣ ರೈ, ಎಸ್. ಅಪ್ಪಯ್ಯ ಮಣಿಯಾಣಿ, ಬಜರಂಗದಳದ ಪ್ರಾಂತ ಮುಂದಾಳು ಮುರಳೀಕೃಷ್ಣ ಹಸಂತ್ತಡ್ಕ, ಹಿಂದೂ ಮುಂದಾಳು ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY