ಭಯೋತ್ಪಾದಕ, ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಹಣ: ಕಾಶ್ಮೀರ, ದಿಲ್ಲಿಯಲ್ಲಿ ಎನ್‌ಐಎ ದಾಳಿ

file photo

ಶ್ರೀನಗರ: ಹವಾಲ ವ್ಯವಹಾರಗಳಲ್ಲಿ ತೊಡಗಿರುವ ಮತ್ತು ಭಯೋತ್ಪಾದಕ ಹಾಗೂ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಹಣ ಒದಗಿಸುತ್ತಿರುವ ವ್ಯಾಪಾರಿಗಳ ವಿರುದ್ಧ ಕಾಶ್ಮೀರ ಮತ್ತು ದಿಲ್ಲಿಯ 16 ಸ್ಥಳಗಳಲ್ಲಿ ಎನ್‌ಐಎ ಬುಧವಾರ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬುಧವಾರ ಬೆಳಿಗ್ಗೆ ಶ್ರೀನಗರ ಮತ್ತು ಉತ್ತರ ಕಾಶ್ಮೀರದ ವಿವಿಧೆಡೆ ಎನ್‌ಐಎ ಅಧಿಕಾರಿಗಳು ವ್ಯಾಪಾರಿಗಳ ಮೇಲೆ ದಾಳಿ ನಡೆಸಿದರಲ್ಲದೆ ಶಂಕಿತ ಸ್ಥಳಗಳಲ್ಲಿ ವ್ಯಾಪಾಕ ಶೋಧ ಕಾರ್ಯಾಚರಣೆ ನಡೆಸಿದರು. ಹಳೆ ದಿಲ್ಲಿಯಲ್ಲಿ ಸುಮಾರು ಐವರು ವ್ಯಾಪಾರಿಗಳ ವಿರುದ್ಧ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದರು. ಓರ್ವ ಫ್ರೀಲ್ಯಾನ್ಸ್ ಫೋಟೊ – ಜರ್ನಲಿಸ್ಟ್ ಸಹಿತ ಇಬ್ಬರು ವ್ಯಕ್ತಿಗಳನ್ನು ಎನ್‌ಐಎ ಬಂಧಿಸಿದ ಒಂದು ದಿನದ ನಂತರ ದಾಳಿಗಳು ನಡೆದಿವೆ. ಬಂಧಿತರು ಕಲ್ಲು ತೂರಾಟದಲ್ಲಿ ತೊಡಗಿದ್ದರಲ್ಲದೆ ಸಾಮಾಜಿಕ ಮಾಧ್ಯಮ ಮೂಲಕ ಭದ್ರತಾ ಸಿಬ್ಬಂದಿಗಳ ವಿರುದ್ಧ ಬೆಂಬಲ ಕ್ರೋಢೀಕರಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಪಾಕಿಸ್ತಾನ ಮೂಲದ ಜಮಾತ್ – ಉದ್ -ದಾವಾ ಮತ್ತು ನಿಷೇತ ಭಯೋತ್ಪಾದಕ ಸಂಘಟನೆ ಲಷ್ಕರ್ -ಇ- ತೋಯ್ಬಾದ ನಾಯಕ ಹಫೀಜ್ ಸಯೀದ್ ಓರ್ವ ಆರೋಪಿ ಎಂದು  ಹೆಸರಿಸಲಾಗಿರುವ ಮೇ 30ರಂದು ದಾಖಲಿಸಲಾಗಿರುವ ಪ್ರಕರಣವೊಂದರ ತನಿಖೆಯ ಅಂಗವಾಗಿ ಎನ್‌ಐಎಯಿಂದ ಈ ದಾಳಿಗಳು ಮತ್ತು ಬಂಧನಗಳು ನಡೆದಿವೆ. ಕಾಶ್ಮೀರ ಕಣಿವೆಯಲ್ಲಿ ಅಶಾಂತಿ ಹುಟ್ಟು ಹಾಕಲು ಭಯೋತ್ಪಾದಕ ಮತ್ತು ದುಷ್ಕೃತ್ಯದ ಚಟುವಟಿಕೆಗಳಿಗೆ ಹಣದ ನೆರವು ಒದಗಿಸಿದ ಪ್ರಕರಣದಲ್ಲಿ ಎನ್‌ಐಎ ಏಳು ಜನರನ್ನು ಬಂಧಿಸಿದೆ.
ವಿವಿಧ ಕಾನೂನು ಬಾಹಿರ ವಿಧಾನಗಳ ಮೂಲಕ ಹಣವನ್ನು ಪಡೆದು ಮತ್ತು ಸಂಗ್ರಹಿಸಿದ ಆರೋಪಗಳ ಮೇಲೆ ಪ್ರಕರಣ ದಾಖಲಾಗಿತ್ತು.
ಕಲ್ಲು ತೂರಾಟ, ಶಾಲೆಗಳಿಗೆ ಬೆಂಕಿ ಹಚ್ಚುವುದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮತ್ತು ಭಾರತ ವಿರುದ್ಧ ಯುದ್ಧ ಸಾರುವ ಮೂಲಕ ಕಣಿವೆಯಲ್ಲಿ ಅಸ್ಥಿರತೆಯನ್ನು ಉಂಟು ಮಾಡುವ ವಿಷಯ ಕೂಡಾ ಅದರಲ್ಲಿ ಸೇರಿದೆ.

LEAVE A REPLY