ರಷ್ಯಾದ ಫಾರ್ ಈಸ್ಟ್ ಜೊತೆ ಸಂಬಂಧ ವಿಸ್ತರಣೆ ಭಾರತ ಆಸಕ್ತಿ : ಸಚಿವೆ ಸುಷ್ಮಾ ಸ್ವರಾಜ್

ಮಾಸ್ಕೊ: ರಷ್ಯಾದ ಸಂಪದ್ಭರಿತ ಫಾರ್ ಈಸ್ಟ್ ಜೊತೆ ತನ್ನ ಆರ್ಥಿಕ ಸಂಬಂಧಗಳನ್ನು ವಿಸ್ತರಿಸಲು ಭಾರತ ಕಾತರದಿಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಭಾರತೀಯ ಹೂಡಿಕೆದಾರರಿಗೆ ಅನುಕೂಲ ಕಲ್ಪಿಸುವಲ್ಲಿ ರಷ್ಯಾ ಸರಕಾರದ ನೆರವನ್ನು ಅವರು ಕೋರಿದರು.
ಉಭಯ ದೇಶಗಳ ನಾಯಕತ್ವ ತಮ್ಮ ಒಟ್ಟು ಪಾಲುದಾರಿಕೆಯಲ್ಲಿ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ಉನ್ನತ ಆದ್ಯತೆಯ ಕ್ಷೇತ್ರಗಳೆಂದು ಗುರುತಿಸಿವೆ. ಕಳೆದ ವರ್ಷ ಪರಸ್ಪರರ ದೇಶಗಳಲ್ಲಿ ಉಭಯ ದೇಶಗಳು ಅತ್ಯಂತ ಗಣನೀಯ ಪ್ರಮಾಣದ ಹೂಡಿಕೆಗಳನ್ನು ಮಾಡಿವೆ ಎಂದು ಸ್ವರಾಜ್ ಹೇಳಿದರು.
ರಷ್ಯಾದಲ್ಲಿ ತೈಲ ರಂಗದಲ್ಲಿ ಭಾರತ ೫.೫ ಶತಕೋಟಿ ಡಾಲರ್ ಹೂಡಿಕೆ ಮಾಡಿದೆ. ಭಾರತದಲ್ಲಿ ರಶ್ಯಾದ ಅತ್ಯಂತ ದೊಡ್ಡ ಹೂಡಿಕೆ ೧೨.೯ ಶತಕೋಟಿ ಡಾಲರ್ ಆಗಿದೆ. ಅದು ಭಾರತದ ಅತ್ಯಂತ ದೊಡ್ಡ ಎಫ್‌ಡಿಐ ಕೂಡಾ ಆಗಿದೆ. ಕಳೆದ ತಿಂಗಳು ತೈಲ ಕ್ಷೇತ್ರದಲ್ಲಿ ರೋಸ್‌ನೆಫ್ಟ್ ಮತ್ತು ಎಸ್ಸಾರ್ ನಡುವೆ ಈ ಒಪ್ಪಂದ ಆಗಿದೆ ಎಂದು ಹೇಳಿದರು. ರಷ್ಯಾದಲ್ಲಿ ನಡೆದ ಈಸ್ಟರ್ನ್ ಇಕನಾಮಿಕ್ ಫೋರಮ್‌ನಲ್ಲಿ ನಡೆದ ಭಾರತ – ರಷ್ಯಾ ವಾಣಿಜ್ಯೋದಮ ಮಾತುಕತೆಯಲ್ಲಿ ಅವರು ಈ ವಿಚಾರವನ್ನು ತಿಳಿಸಿದರು.
ರಾಜಕೀಯವಾಗಿ ಭಾರತ ರಷ್ಯಾದೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿದೆ. ಏಳು ದಶಕಗಳಿಂದ ನಾವು ಪಾಲುದಾರರಾಗಿದ್ದೇವೆ. ನಮ್ಮ ಮಿತ್ರತ್ವ ಮಾನವ ಚಟುವಟಿಕೆಯ ಬಹುತೇಕ ಎಲ್ಲಾ ರಂಗಗಳಿಗೆ ವಿಸ್ತರಣೆಗೊಂಡಿದೆ ಎಂದು ಸ್ವರಾಜ್ ಹೇಳಿದರು.
ಈ ಸಭೆಯು ರಶ್ಯಾರ ಫಾರ್ ಈಸ್ಟ್ ಜೊತೆ ಭಾರತದ ಆರ್ಥಿಕ ಸಂಬಂಧ ವಿಸ್ತರಣೆಯಲ್ಲಿ ಒಂದು ಹೊಸ ಮತ್ತು ಭರವಸೆಯುಕ್ತ ಆರಂಭ ಎಂದು ಬಣ್ಣಿಸಿದ ಅವರು, ಉಭಯ ದೇಶಗಳು ಸಮಾನ ಆಸಕ್ತಿಯ ಕ್ಷೇತ್ರಗಳನ್ನು ಗುರುತಿಸಬೇಕು ಮತ್ತು ಪರಸ್ಪರವಾಗಿ ಹೆಚ್ಚೆಚ್ಚು ಕಾರ್ಯ ನಡೆಸಲು ಉತ್ತೇಜನ ನೀಡಬೇಕು ಎಂದರು. ರಷ್ಯಾದ ವಾಣಿಜ್ಯೋದ್ಯಮ ಸಮುದಾಯದಿಂದ ಹೂಡಿಕೆಗಳನ್ನು ಕೂಡಾ ಅವರು ಕೋರಿದರು.

LEAVE A REPLY