ಗಣೇಶ ವಿಸರ್ಜನೆ : ಮಹಾರಾಷ್ಟ್ರದಲ್ಲಿ ೧೫ ಸಾವು

ಮುಂಬೈ: ಮಹಾರಾಷ್ಟ್ರದಲ್ಲಿ ಗಣಪತಿ ವಿಸರ್ಜನೆ ವೇಳೆ 15 ಮಂದಿ ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ.
ಗಣೇಶ ವಿಗ್ರಹವನ್ನು ನೀರಿನಲ್ಲಿ ಮುಳುಗಿಸುವ ವೇಳೆ  ಔರಂಗಬಾದ್‌ನ ಶಿವಾನಿ ಸರೋವರದಲ್ಲಿ ಮೂವರು ವ್ಯಕ್ತಿಗಳು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಪುಣೆಯಲ್ಲಿ ನಾಲ್ವರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಜಲ್‌ಗಾನ್ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ಹಾಗೂ ನಾಸಿಕ್‌ನಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಪೊಲೀಸ್ ಅಕಾರಿಗಳು ತಿಳಿಸಿದ್ದಾರೆ.
ಮಂಗಳವಾರ 11 ಮಂದಿ ಸಾವಿಗೀಡಾಗಿದ್ದು, ಬುಧವಾರ ನಾಲ್ವರು  ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ಗಣಪತಿ ವಿಸರ್ಜನೆ ವೇಳೆ ಮಹಾರಾಷ್ಟ್ರ ರಾಜ್ಯದಲ್ಲಿ ಒಟ್ಟು ೧೫ ಮಂದಿ ಸಾವಿಗೀಡಾಗಿದಂತಾಗಿದೆ ಎಂದು  ಪೊಲೀಸ್ ಅಕಾರಿಗಳು ತಿಳಿಸಿದ್ದಾರೆ. ಅಹಮದ್ ನಗರ, ಸತಾರ, ಪರ್ಬಾನಿ ಪ್ರದೇಶಗಳಲ್ಲಿಯೂ ಸಾವು ಸಂಭವಿಸಿದೆ ಎನ್ನಲಾಗಿದೆ.
ಇನ್ನು ಮುಂಬೈನ ಪ್ರಸಿದ್ಧ ಲಾಲ್‌ಬಾಗ್ ಕಾ ರಾಜಾ ಗಣಪತಿಯ ವಿಗ್ರವನ್ನು ಒಟ್ಟು 22 ಗಂಟೆ ಪೂರ್ವ ಸಿದ್ಧತೆ ಬಳಿಕ ವಿಸರ್ಜನೆ ಮಾಡಲಾಗಿದೆ. ದಗ್‌ದುಸೇತಿ ಹಲ್ವಾಯಿ ಗಣಪತಿ ವಿಸರ್ಜನೆ ಪೂರ್ವದಲ್ಲಿ 20  ಗಂಟೆಗಳ ಕಾಲ ಪೂರ್ವ ಸಿದ್ಧತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಮುಂಬೈನಾದ್ಯಂತ ಗಣೇಶ ವಿಗ್ರಹಗಳ ವಿಸರ್ಜನೆ ಹಿನ್ನೆಲೆಯಲ್ಲಿ  ಮಂಗಳವಾರ ಬಿಗಿ ಭದ್ರತೆ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಒಟ್ಟು ೭೦೦೦ ಸಾರ್ವಜನಿಕ ಗಣೇಶ ಹಾಗೂ 33000 ಮನೆಯಲ್ಲಿ ಇರಿಸಿದ ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಲಾಗಿದೆ. ಬೀಚ್‌ನಲ್ಲಿ, ಸರೋವರದಲ್ಲಿ, ಕೃತಕವಾಗಿ ನಿರ್ಮಿಸಿದ  ಹೊಂಡಗಳಲ್ಲಿ ವಿಸರ್ಜನೆಯನ್ನು ಮಾಡಲಾಗಿದೆ. ಬೃಹತ್ ಮುಂಬೈ ಮಹಾನಗರ ಪಾಲಿಕೆ ನಿರ್ಮಾಣ ಮಾಡಿದ ಹೊಂಡದಲ್ಲಿಯೇ ಅತ್ಯಧಿಕ ಸಂಖ್ಯೆ ವಿಗ್ರಹಗಳ ವಿಸರ್ಜನೆ ಮಾಡಲಾಗಿದೆ.

LEAVE A REPLY