ಡಿವೈಎಸ್‌ಪಿ ಗಣಪತಿ ಅಸಹಜ ಸಾವು ಪ್ರಕರಣ : ಸಚಿವ ಜಾರ್ಜ್ ಕೆ.ಜೆ. ಜಾರ್ಜ್, ಮೊಹಂತಿ, ಪ್ರಸಾದ್ ವಿಚಾರಣೆಗೆ ಕೋರ್ಟ್ ಆದೇಶ

ಹೊಸದಿಲ್ಲಿ: ಮಂಗಳೂರು ಡಿವೈಎಸ್‌ಪಿ ಎಂ.ಕೆ. ಗಣಪತಿ ಅಸಹಜ ಸಾವು ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಕೇಂದ್ರಿಯ ತನಿಖಾ ದಳ (ಸಿಬಿಐ)ಕ್ಕೆ ವಹಿಸಿದೆ. ಮೂರು ತಿಂಗಳ ಒಳಗೆ ವರದಿ ಸಲ್ಲಿಸುವಂತೆಯೂ ಸೂಚಿಸಿದೆ. ಇದರಿಂದಾಗಿ ಅಂದು ಗೃಹ ಸಚಿವರಾಗಿದ್ದ ಈಗಿನ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಡಿವೈಎಸ್‌ಪಿ ಎಂ.ಕೆ.ಗಣಪತಿ ಅಸಹಜ ಸಾವಿನ ಸಂಬಂಧ ಸಿಬಿಐ ತನಿಖೆ ನಡೆಸಲು ಸೂಚಿಸುವಂತೆ ಗಣಪತಿ ಅವರ ತಂದೆ ಕುಶಾಲಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಶರಾದ ಆದರ್ಶ ಕುಮಾರ್ ಗೋಯಲ್ ಮತ್ತು ಯು.ಯು. ಲಲಿತ್ ಅವರನ್ನು ಒಳಗೊಂಡ ನ್ಯಾಯಪೀಠ ಮಂಗಳವಾರ ನಡೆಸಿತು.
ಈ ಹಿಂದೆ ಸಿಬಿಐ ತನಿಖೆಗೆ ಒಪ್ಪಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು. ಹೀಗಾಗಿ ಎಂ.ಕೆ. ಕುಶಾಲಪ್ಪ ಅವರು ಸಿಬಿಐ ತನಿಖೆ ಕೋರಿ ಸುಪ್ರೀಂ ಮೆಟ್ಟಿಲೇರಿದ್ದರು. ವಿಡಿಯೋ ಸಾಕ್ಷ್ಯವಿದ್ದರೂ ಯಾವುದೇ ಕ್ರಮ ಜರುಗಿಸುವಲ್ಲಿ ಕರ್ನಾಟಕ ಸರ್ಕಾರ ಮತ್ತು ತನಿಖಾ ತಂಡ ವಿಫಲವಾಗಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕುಶಾಲಪ್ಪ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ.
ಜಾರ್ಜ್ ವಿಚಾರಣೆಗೆ ಆದೇಶ
ಗಣಪತಿ ಅಸಹಜ ಸಾವು ಪ್ರಕರಣ ಅನೇಕ ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಹಾಗೂ ಆಗಿನ ಗೃಹ ಸಚಿವ ಕೆ.ಜೆ. ಜಾರ್ಜ್, ಐಪಿಎಸ್ ಅಕಾರಿಗಳಾದ ಪ್ರಣವ್ ಮೊಹಂತಿ, ಎ.ಎಂ. ಪ್ರಸಾದ್ ಅವರ ಹೆಸರೂ ಉಖಿಸಿರುವುದರಿಂದ ಸಿಬಿಐ ತನಿಖೆ ಅಗತ್ಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಮಾತ್ರವಲ್ಲದೇ ಈ ಮೂವರ ವಿಚಾರಣೆ ನಡೆಸಿ ಮೂರು ತಿಂಗಳಿನೊಳಗೆ ವರದಿ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದೆ.
ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು  ಪ್ರಯೋಗಾಲಯದ ವರದಿ ಬರುವ ಮುನ್ನವೇ ವರದಿ ಸಲ್ಲಿಸಿzರೆ. ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿzರೆ. ಹಾಗಾಗಿ ಪ್ರಕರಣದ ತನಿಖೆಯ ಅಗತ್ಯ ಇದೆ ಎಂದು ನ್ಯಾಯಪೀಠ ತಿಳಿದೆ.
ಮಡಿಕೇರಿಯ ವಸತಿಗೃಹವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಡಿವೈಎಸ್‌ಪಿ ಎಂ.ಕೆ.ಗಣಪತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಸರ್ಕಾರದ ಪರ ವಕೀಲರಾದ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದರು. ಆದರೂ, ಮೇಲ್ನೋಟಕ್ಕೆ ಈ ಪ್ರಕರಣವು ಸಂಶಯಾಸ್ಪದವಾಗಿ ಕಂಡುಬಂದಿರುವುದಿರಂದ ಸಿಬಿಐ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಒಟ್ಟಾರೆ ಈ ಪ್ರಕರಣದಲ್ಲಿ ಪಡೆಯಲಾದ ಹೇಳಿಕೆಗಳ ಸಮರ್ಪಕ ದಾಖಲೆಗಳನ್ನು ಸಲ್ಲಿಸುವಲ್ಲಿ ರಾಜ್ಯ ಸರ್ಕಾರ ಎಡವಿರುವುದು ಸ್ಪಷ್ಟವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠವು ಉನ್ನತ ತನಿಖೆಗೆ ಆದೇಶಿಸಿದೆ.
ಸಾವಿಗೂ ಮುನ್ನ ಡಿವೈಎಸ್‌ಪಿ ಗಣಪತಿ ಅವರು ಸ್ಥಳೀಯ ವಾಹಿನಿಯೊಂದಕ್ಕೆ ಸಂದರ್ಶನಿ ನೀಡಿದ್ದರು. ಇದು ರಾಜ್ಯ ರಾಜಕೀಯ ವಲಯ ಹಾಗೂ ಪೊಲೀಸ್ ಇಲಾಖೆಯಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿತ್ತು. ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಅಲ್ಲದೆ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಜಾರ್ಜ್ ಅವರಿಂದ ರಾಜೀನಾಮೆಯನ್ನು ಪಡೆದಿತ್ತು. ಪ್ರಕರಣದ ತನಿಖೆ ನಡೆಸಿದ ಸಿಐಡಿ ಈ ಮೂವರು ಆರೋಪಿಗಳಿಗೆ ಕ್ಲೀನ್‌ಚಿಟ್ ನೀಡಿ, ಬಿ ರಿಪೋರ್ಟ್ ಸಲ್ಲಿಸಿದೆ.
ಸರ್ಕಾರದಿಂದ ಅಧಿಕಾರ ದುರ್ಬಳಕೆ
ಡಿವೈಎಸ್‌ಪಿ ಗಣಪತಿ ಅವರ  ನಿಗೂಢ ಸಾವಿನ ಪ್ರಕರಣದಲ್ಲಿ ರಾಜ್ಯ ಸರಕಾರ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು ಎಲ್ಲ ಆರೋಪಿಗಳನ್ನು ರಕ್ಷಿಸಲು ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿತ್ತು.ದುರದೃಷ್ಟವಶಾತ್ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ನಾನು ಸಲ್ಲಿಸಿದ ಮನವಿಯೂ ತಿರಸ್ಕೃತವಾಗಿತ್ತು.ಆದರೆ ಈ ಪ್ರಕರಣದಲ್ಲಿ ಕೆಳಮಟ್ಟದ ತನಿಖಾಕಾರಿಯೊಬ್ಬರು ಮೇಲ್ಮಟ್ಟದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಅಸಮರ್ಥರೆಂಬುದು ಯಾರಿಗಾದರೂ ಅರ್ಥವಾಗುವಂತಹ ವಿಚಾರ.ಆದ್ದರಿಂದ ನಾನು ನ್ಯಾಯಾಂಗದಲ್ಲಿ ವಿಶ್ವಾಸ, ನಂಬಿಕೆಯಿಟ್ಟು ಸರ್ವೋಚ್ಚ ನ್ಯಾಯಾಲಯದ ಮೆಟ್ಟಲೇರಬೇಕಾಯಿತು. ಇದೀಗ ಸುಪ್ರೀಂಕೋರ್ಟ್ ಪ್ರಕರಣದ ಸಿಬಿಐ ತನಿಖೆಗೆ ಆದೇಶಿಸಿರುವುದು , ಡಿವೈಎಸ್‌ಪಿ ದಿ.ಗಣಪತಿ ಅವರ ಆತ್ಮಕ್ಕೆ ಶಾಂತಿ ಕಲ್ಪಿಸುವ ಮತ್ತು ಅವರ ದುಃಖತಪ್ತ ಕುಟುಂಬಕ್ಕೆ ಸಾಂತ್ವನ ನೀಡುವಂತಹದ್ದಾಗಿದೆ.ಈ ತನಿಖೆಯಿಂದ ನ್ಯಾಯ ಲಭಿಸುವ ವಿಶ್ವಾಸ ನಮ್ಮದು.
ಪವನಚಂದ್ರ ಶೆಟ್ಟಿ, ಡಿವೈಎಸ್‌ಪಿ ಕುಟುಂಬದ ಪರ
ಕಾನೂನು ಸಮರ ನಡೆಸುತ್ತಿರುವ ಖ್ಯಾತ ನ್ಯಾಯವಾದಿ

LEAVE A REPLY