ದಟ್ಟಾರಣ್ಯದಲ್ಲಿ ಕಳ್ಳಬೇಟೆ : ದುಷ್ಕರ್ಮಿಗಳ ಗುಂಡೇಟಿಗೆ ಬಡಪಾಯಿ ಕಾಡುಕೋಣಗಳು ಬಲಿ

ಉಡುಪಿ: ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ನೇರಳಕಟ್ಟೆ ರಸ್ತೆಯಲ್ಲಿ ಮಂಗಳವಾರ ಮುಂಜಾನೆ ದುಷ್ಕರ್ಮಿಗಳು ಎರಡು
ಕಾಡುಕೋಣಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಇದರೊಂದಿಗೆ ಇಷ್ಟು ದಿನಗಳ ಕಾಲ ದಟ್ಟಾರಣ್ಯದಲ್ಲಿ ನಡೆಯುತ್ತಿದ್ದ ವನ್ಯಪ್ರಾಣಿಗಳ ಕಳ್ಳಬೇಟೆ ಇದೀಗ ಬಹಿರಂಗಗೊಂಡಿದೆ.
ಕುಂದಾಪುರ ವಲಯ ಅರಣ್ಯ ವ್ಯಾಪ್ತಿಯ ಅಂಪಾರು ಗ್ರಾಮದ ಪಟೇಲರ ಮನೆ ಎಂಬಲ್ಲಿ ಖಾಸಗಿ ಜಮೀನಿನಲ್ಲಿ ಎರಡು ಕಾಡುಕೋಣಗಳು ಬಂದೂಕಿನ ಗುಂಡೇಟಿಗೆ ಬಲಿಯಾಗಿವೆ. ಆದರೆ ಭಾರೀ ಗಾತ್ರದ ಕಾಡುಕೋಣಗಳನ್ನು ಸಾಗಿಸಲು ಸಾಧ್ಯವಾಗದೇ ಸ್ಥಳದಲ್ಲೇ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಘಟನೆ ಮಂಗಳವಾರ ಮುಂಜಾನೆ ಸ್ಥಳೀಯರ ಗಮನಕ್ಕೆ ಬಂದಿದೆ. ಘಟನೆ ಮುಂಜಾನೆ ಸುಮಾರು ೩.೩೦ರ ವೇಳೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ತಕ್ಷಣ ಬೆಳಗ್ಗೆ ೭ ಗಂಟೆಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆ ೭.೧೫ರ ಸುಮಾರಿಗೆ ಅರಣ್ಯ ಇಲಾಖೆ ಕುಂದಾಪುರ ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ ಮತ್ತವರ ತಂಡ ಸ್ಥಳಕ್ಕೆ ತಲುಪಿದ್ದು, ಪರಿಶೀಲನೆ ನಡೆಸಿದ್ದಾರೆ. ಬಳಿಕ ಪಶು ವೈದ್ಯರನ್ನು ಕರೆಸಿ ಪರೀಕ್ಷೆಗೊಳಪಡಿಸಿದ್ದು, ಕಾಡುಕೋಣಗಳು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.
ಕಾಡುಕೋಣಗಳ ಕಳೇಬರವನ್ನು ದಹನ ಮಾಡಲು ಸ್ಥಳದಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೇ ಇರುವುದರಿಂದ ಕುಂದಾಪುರ ಮ್ಯಾಜಿಸ್ಟ್ರೇಟ್ ಅವರಿಗೆ ದೂರು ಸಲ್ಲಿಸಿ, ಪ್ರಕರಣ ದಾಖಲಿಸಿ ಕಳೇಬರವನ್ನು ಸ್ಥಳಾಂತರಿಸಲಾಯಿತು. ಅರಣ್ಯ ಇಲಾಖೆಯ ನೇರಳಕಟ್ಟೆ ನರ್ಸರಿಯಲ್ಲಿ ಎರಡೂ ಕಾಡುಕೋಣಗಳನ್ನು ಮಹಜರು ಹಾಗೂ ಮರಣೋತ್ತರ ಪರೀಕ್ಷೆ ನಡೆಸಿ ದಹನ ಮಾಡಲಾಯಿತು.
ಸಿಕ್ಕಿದೆ ಆರೋಪಿಗಳ ಸುಳಿವು! 
ಸ್ಥಳೀಯರ ಪ್ರಕಾರ ಪ್ರಕರಣದಲ್ಲಿ ಒಂದು ಕಾರು, ಒಂದು ಗೂಡ್ಸ್ ವಾಹನ ಮತ್ತು ಒಂದು ಬೈಕ್ ಹಾಗೂ ಆರರಿಂದ ಎಂಟು ಮಂದಿ ಭಾಗಿಯಾಗಿರುವ ಶಂಕೆ ಇದೆ. ಎರಡು ಕಾಡು ಕೋಣಗಳನ್ನು ಗುಂಡಿಕ್ಕಿ ಕೊಂದ ಆರೋಪಿಗಳ ಕುರಿತ ಸುಳಿವು ಸಿಕ್ಕಿದೆ. ಕಾಡುಕೊಣಗಳನ್ನು ಹತ್ಯೆ ನಡೆಸಿದ ಬಳಿಕ ಅವುಗಳ ಸಾಗಾಟಕ್ಕೆ ಪ್ರಯತ್ನಿಸಿದ ಕುರುಹುಗಳು ಸ್ಥಳದಲ್ಲಿ ಲಭ್ಯವಾಗಿವೆ. ಮಾತ್ರವಲ್ಲ ಅಲ್ಲೇ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ನಾಲ್ಕೈದು ವಾಹನಗಳು ಓಡಾಟ ನಡೆಸಿರುವುದು ಸೆರೆಯಾಗಿದೆ. ಇದೆಲ್ಲವೂ ಅರಣ್ಯ ಇಲಾಖಾಧಿಕಾರಿಗಳಿಗೆ ಲಭಿಸಿದ್ದು, ಆರೋಪಿಗಳ ಬಂಧನಕ್ಕಾಗಿ ತನಿಖೆ ಆರಂಭಿಸಿದ್ದಾರೆ.

LEAVE A REPLY