ಡೋಕ್ಲಾಂ ಬಿಕ್ಕಟ್ಟಿನ ನಂತರ ಮೊದಲ ಬಾರಿಗೆ ನಡೆದ ಮೋದಿ-ಕ್ಸಿ ದ್ವಿಪಕ್ಷೀಯ ಚರ್ಚೆ ಯಶಸ್ವಿ

ಕ್ಸಿಯಾಮೆನ್: ಸುಮಾರು 73 ದಿನಗಳ ಕಾಲ ಭಾರತ ಹಾಗೂ ಚೀನಾ ನಡುವೆ ಸೇನಾ ಸಂಘರ್ಷದ ಸೂಕ್ಷ್ಮ ಪರಿಸ್ಥಿತಿ ಸೃಷ್ಟಿಸಿದ್ದ ಡೋಕ್ಲಾಂ ಬಿಕ್ಕಟ್ಟು ಶಮನಗೊಂಡ ಬಳಿಕ ಇದೇ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಂಗಳವಾರ ಮಹತ್ವದ ದ್ವಿಪಕ್ಷೀಯ ಸಮಾಲೋಚನೆ ನಡೆಸಿದ್ದಾರೆ.
ಚೀನಾದ ಕ್ಸಿಯಾಮೆನ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ದೇಶಗಳ 9ನೇ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಈ ಇಬ್ಬರು ನಾಯಕರು, ಪ್ರತ್ಯೇಕವಾಗಿ ಭೇಟಿಯಾಗಿ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ ಕುರಿತು ಸಮಾಲೋಚನೆ ನಡೆಸಿದ್ದಾರೆ.
ಭಯೋತ್ಪಾದನೆ ನಿಗ್ರಹಕ್ಕೆ ಬೆಂಬಲದ ಆಶ್ವಾಸನೆ ನೀಡಿದ ಬಗ್ಗೆ ಇದೇ ಸಂದರ್ಭ ಚೀನಾ ಅಧ್ಯಕ್ಷರಿಗೆ ಮೋದಿ ಅಭಿನಂದನೆ ಸಲ್ಲಿಸಿದರು. ಗಡಿಯಲ್ಲಿ ಶಾಂತಿ ಕಾಪಾಡಲು ಮೋದಿ ಹಾಗೂ ಕ್ಸಿ ಮಹತ್ವದ ಸಮಾಲೋಚನೆ ನಡೆಸಿದ್ದು, ಎರಡೂ ದೇಶಗಳ ಹಿತಾಸಕ್ತಿಗಾಗಿ ಸಂಬಂಧಗಳನ್ನು ಪರಸ್ಪರ ಸುಧಾರಣೆ ಮಾಡಿಕೊಳ್ಳಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಸೇರಿದಂತೆ ಉನ್ನತಾಧಿಕಾರಿಗಳು ಪ್ರಧಾನಿ ಜೊತೆಗಿದ್ದರು.
ಮೂರು ದಿನಗಳ ಚೀನಾ ಯಶಸ್ವಿ ಪ್ರವಾಸದ ಬಳಿಕ ಮೋದಿ ಎರಡು ದಿನಗಳ ಭೇಟಿಗಾಗಿ ಕ್ಸಿಯಾಮೆನ್‌ನಿಂದ ಮ್ಯಾನ್ಮಾರ್‌ಗೆ ಪ್ರಯಾಣ ಬೆಳೆಸಿದರು.

LEAVE A REPLY