ದೇಶದ ನೂತನ ರಕ್ಷಣಾ ಸಚಿವೆಗೆ ಕರ್ನಾಟಕದ ಕರಾವಳಿ ಜಿಲ್ಲೆ ಎಂದರೆ ವಿಶೇಷ ಅಭಿಮಾನ!

ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಪಾಂಚಜನ್ಯ ಉದ್ಘಾಟನೆಗೊಂಡ ಕ್ಷಣ.

ಪುತ್ತೂರು: ದೇಶದ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕದ ಕರಾವಳಿ ಜಿಲ್ಲೆ ಎಂದರೆ ವಿಶೇಷ ಅಭಿಮಾನ!
ಇದಕ್ಕೆ ಸಾಕ್ಷಿ ಕೇವಲ 234 ದಿನಗಳ ಹಿಂದೆ… ಅಂದರೆ 2017 ಜನವರಿ 12 ರಂದು ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರವರ್ತನೆಯಲ್ಲಿ ಆರಂಭಗೊಂಡ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಪಾಂಚಜನ್ಯವನ್ನು ಅವರೇ ಖುದ್ದಾಗಿ ಅಗಮಿಸಿ ಉದ್ಘಾಟಿಸಿದ್ದು ಹಾಗೂ ಇಲ್ಲಿನ ವಿದ್ಯಾರ್ಥಿಗಳನ್ನು ಬೆನ್ತಟ್ಟಿ ಪ್ರೋತ್ಸಾಹಿಸಿದ್ದು. ಆಗ ಕೇಂದ್ರ ಸರಕಾರದ ವಾಣಿಜ್ಯ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಅತ್ಯಂತ ಅಭಿಮಾನದಿಂದ ರೇಡಿಯೋ ಪಾಂಚಜನ್ಯವನ್ನು ಉದ್ಘಾಟಿಸಿ ಶುಭಹಾರೈಸಿದ್ದರು. ವಿವೇಕಾನಂದ ಕಾಲೇಜಿನಲ್ಲಿ ಸಮುದಾಯ ಬಾನುಲಿ ಕೇಂದ್ರ ಉದ್ಘಾಟಿಸಿದ ಸಚಿವೆ ನಿರ್ಮಲಾ ಸೀತಾರಾಮನ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ್ದರು. ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಟ್ವೀಟ್ ಮಾಡಿದ ವಿಷಯಗಳಿಗೆ ಸಭೆಯಲ್ಲೇ ಟ್ವೀಟ್ ಮೂಲಕ ವಿದ್ಯಾರ್ಥಿ ಸಮೂಹದ ಮೇಲೆ ಪ್ರಭಾವ ಬೀರಿದ್ದರು. ಕಾರ್ಯಕ್ರಮ ಮುಗಿಸಿ ದೆಹಲಿಗೆ ತೆರಳಿದ ಬಳಿಕ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಪರಿಸರ, ಶೈಕ್ಷಣಿಕ ಶಿಸ್ತು ಮತ್ತು ಬದ್ಧತೆಯ ಕುರಿತಂತೆ ಮೆಚ್ಚುಗೆಯ ಮಾತುಗಳನ್ನು ಅವರು ಟ್ವೀಟ್ ಮೂಲಕ ಮಾಡಿದ್ದರು.
ಇಷ್ಟೇ ಅಲ್ಲ, ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಯ ಧಾರಣೆ ಕುರಿತಂತೆ ಸಚಿವೆ ನಿರ್ಮಲಾ ಸೀತಾರಾನ್ ಹೆಚ್ಚಿನ ಅಸ್ಥೆ ವಹಿಸಿದ್ದರು. ಕರಾವಳಿ ಭಾಗದ ಸಂಸದರು ಅಡಿಕೆ ಧಾರಣೆ ಕುರಿತು ಪ್ರತೀ ಬಾರಿಯೂ ಸಚಿವರನ್ನು ಭೇಟಿ ಮಾಡಿದಾಗ ಅಡಿಕೆ ಬೆಳೆಗಾರರಿಗೆ ಸಹಾಯವಾಗುವ ರೀತಿಯಲ್ಲಿ ಸ್ಪಂದನೆ ಮಾಡುತ್ತಿದ್ದರು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳುತ್ತಾರೆ. ಈ ಭಾಗದ ರೈತರ ರಕ್ಷಣೆಗಾಗಿ, ರೈತರ ಹಿತಾಸಕ್ತಿ ಕಾಪಾಡಲು ವಾಣಿಜ್ಯ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಸಹಕಾರ ನೀಡಿದ್ದರು.
ಬಾಹ್ಯ ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ದೇಶದ ರಕ್ಷಣಾ ಸಚಿವೆಯಾಗಿ ಅಧಿಕಾರ ವಹಿಸಿರುವ ನಿರ್ಮಲಾ ಸೀತಾರಾಮನ್ ವಾಣಿಜ್ಯ ಸಚಿವೆಯಾಗಿ ಯಶಸ್ಸು ಸಾಧಿಸಿದ ರೀತಿಯಲ್ಲಿ ಯಶಸ್ಸು ಗಳಿಸಲಿ. ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಮೇಲೆ ಪ್ರೀತಿಯಿಟ್ಟು ಇಲ್ಲಿನ ಸಮುದಾಯ ಬಾನುಲಿ ಕೇಂದ್ರವನ್ನು ಉದ್ಘಾಟಿಸಿದ್ದ ಸಚಿವೆ ನಿರ್ಮಲಾ ಸೀತಾರಾಮನ್ ಕುರಿತು ಎಲ್ಲರಿಗೂ ಅಭಿಮಾನವಿದೆ ಎನ್ನುತ್ತಾರೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಹಾಗೂ ರೇಡಿಯೋ ಪಾಂಚಜನ್ಯ ಆಡಳಿತ ಸಮಿತಿ ಅಧ್ಯಕ್ಷ ಗೋಪಾಕೃಷ್ಣ ಕುಂಟಿನಿ.

LEAVE A REPLY