ವಿಭಜನೆಯತ್ತ ಬಿಹಾರ ಕಾಂಗ್ರೆಸ್ : ನಿತೀಶ್ ನೇತೃತ್ವದ ಜೆಡಿ (ಯು) ಸೇರಲು 14 ಶಾಸಕರ ನಿರ್ಧಾರ

ಪಾಟ್ನಾ: ಬಿಹಾರ ಇನ್ನೊಂದು ಸುತ್ತಿನ ರಾಜಕೀಯ ನಾಟಕಕ್ಕೆ ಸಾಕ್ಷಿಯಾಗಲು ಸರ್ವ ಸನ್ನದ್ಧವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಗೊಳ್ಳುವತ್ತ ಸಾಗುತ್ತಿದೆ. ಕನಿಷ್ಠ 14 ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ನಿತೀಶ್‌ಕುಮಾರ್ ನೇತೃತ್ವದ ಜನತಾದಳ (ಸಂಯುಕ್ತ)ವನ್ನು ಸೇರಲು ಯೋಜಿಸಿದ್ದಾರೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಕಾಂಗ್ರೆಸ್‌ನ ಕೇಂದ್ರೀಯ ನಾಯಕತ್ವ ಬಿಹಾರ ಘಟಕದ ಮುಖ್ಯಸ್ಥ ಅಶೋಕ್ ಚೌಧರಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‌ಪಿ) ನಾಯಕ ಸದಾನಂದ ಸಿಂಗ್‌ಅವರನ್ನು ಗುರುವಾರ ರಾಷ್ಟ್ರ ರಾಜಧಾನಿಗೆ ಕರೆಸಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂ ಬಿಹಾರದ ಆ ಉಭಯ ನಾಯಕರನ್ನು ಭೇಟಿಯಾಗಿ ಪಕ್ಷ ಒಡೆಯುವುದನ್ನು ತಡೆಗಟ್ಟುವಂತೆ ಅವರಿಗೆ ಸೂಚಿಸಿದ್ದಾರೆ. ಬಿಹಾರದಲ್ಲಿ ಕಾಂಗ್ರೆಸ್ 27 ಶಾಸಕರು ಮತ್ತು ಆರು ಮಂದಿ ಎಂಎಲ್‌ಸಿಗಳನ್ನು ಹೊಂದಿದೆ.
ಸಭೆಯಲ್ಲಿ ಪಕ್ಷದ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್, ಅಹ್ಮದ್ ಪಟೇಲ್ ಮತ್ತು ಸಿ.ಪಿ.ಜೋಶಿ ಕೂಡಾ ಹಾಜರಿದ್ದರು.
ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿ(ಯು) ಅಧ್ಯಕ್ಷ ನಿತೀಶ್ ಕುಮಾರ್ ಅವರು ಜು.೨೬ರಂದು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮತ್ತು ಕಾಂಗ್ರೆಸ್‌ನೊಂದಿಗೆ ಸಂಬಂಧ ಕಡಿದುಕೊಂಡಿದ್ದಾರೆ. ಮೂರು ಪಕ್ಷಗಳು ಸೇರಿ ೨೦೧೫ರಲ್ಲಿ ಮಹಾ ಘಟ ಬಂಧನವನ್ನು ರಚಿಸಿ ಆ ವರ್ಷ ಅಕ್ಟೋಬರ್ – ನವೆಂಬರ್ ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಕಾರಕ್ಕೆ ಏರಿದ್ದವು.
ಅಂದು ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಬಂದುದನ್ನು ಅನುಸರಿಸಿ ಕುಮಾರ್ ಅವರು ಮಹಾಘಟ ಬಂಧನದಿಂದ ಹೊರ ಬಂದಿದ್ದರು. ರಾಜ್ಯದಲ್ಲಿ ಈಗಾಗಲೇ ಶಕ್ತಿ ಕಳೆದುಕೊಂಡಿರುವ ಮತ್ತು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿರುವ  ಕಾಂಗ್ರೆಸನ್ನು ತೊರೆದು ಜೆಡಿ(ಯು) ಅಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿಯೊಂದಿಗೆ ಕೈ ಜೋಡಿಸಿತ್ತು. ಆದರೂ, ಬಿಹಾರದಲ್ಲಿ ತನ್ನ ಶಾಸಕಾಂಗ ಪಕ್ಷ ಸಂಪೂರ್ಣ ಸುರಕ್ಷಿತವಾಗಿದೆ. ಅದಕ್ಕೆ ಯಾವುದೇ ಬೆದರಿಕೆ ಇಲ್ಲ. ಬಿಹಾರ ಮುಖ್ಯಮಂತ್ರಿ ರಾಜ್ಯದಲ್ಲಿ ಪಕ್ಷವನ್ನು ದುರ್ಬಲಗೊಳಿಸಲು ಪ್ರಯತ್ನ ಪಡುತ್ತಿದ್ದಾರೆ ಎಂದು ಶುಕ್ರವಾರ ಕಾಂಗ್ರೆಸ್ ವಕ್ತಾರ ಆನಂದ ಶರ್ಮ ಹೇಳಿದ್ದರು. ಗುರುವಾರ ಸೋನಿಯಾರನ್ನು ಭೇಟಿಯಾದ ನಂತರ ಅಶೋಕ್ ಚೌಧರಿ ಅವರು ಕೂಡಾ ರಾಜ್ಯದಲ್ಲಿ ಪಕ್ಷ ಒಗ್ಗಟ್ಟಿನಿಂದಿದೆ ಎಂದು ಹೇಳಿದ್ದರು.

LEAVE A REPLY