ಬ್ಲೇಡ್‌ನಿಂದ ಕೊಯ್ದುಕೊಂಡ ವಿದ್ಯಾರ್ಥಿ: ಮಂಗಳೂರಿನಲ್ಲೂ ಸಾವಿನ ಆಟ ಬ್ಲೂವೇಲ್ ಭೂತ?

file photo
ಮಂಗಳೂರು: ಸಾವಿನ ಆಟ ‘ಬ್ಲೂವೇಲ್’ಗೆ ಮಂಗಳೂರಿನ ವಿದ್ಯಾರ್ಥಿಯೊಬ್ಬ ತನ್ನ ಕೈಯನ್ನು ಬ್ಲೇಡ್‌ನಿಂದ ಕೊಯ್ದುಕೊಂಡಿರುವ  ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ನಡೆದು ದಿನಗಳೇ ಆದರೂ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ಪ್ರಕರಣವನ್ನು ಗೌಪ್ಯವಾಗಿಟ್ಟಿದೆ. ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಪ್ರೇರಣೆ ನೀಡುವ ಬ್ಲೂವೇಲ್‌ನ ಮಾಯಾಲೋಕಕ್ಕೆ ಸಿಲುಕಿದ್ದ. ಕಲಿಕೆಯಲ್ಲಿ ಜಣನಾಗಿದ್ದ ಹುಡುಗ ದಿನಕಳೆದಂತೆ ಹಿಂದೆ ಬೀಳುತ್ತಿದ್ದುದನ್ನು ಗಮನಿಸಿದ ಶಿಕ್ಷಕರು ಆತನ ಪೋಷಕರನ್ನು ಕರೆದು ಮಾತನಾಡಿದ್ದಾರೆ. ಈ ಬಗ್ಗೆ ಮನೆಯಲ್ಲಿ ಪ್ರಶ್ನಿಸಿದಾಗ  ಬಾಯಿಬಿಡದ ಹುಡುಗ ಒಂದು ದಿನ ಬ್ಲೇಡ್‌ನಿಂದ  ತನ್ನ ಕೈ ಕೊಯ್ದುಕೊಂಡಿದ್ದಾನೆ. ಇದನ್ನು ಗಮನಿಸಿದ ಹೆತ್ತವರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಪ್ತ ಸಮಾಲೋಚನೆಗೆ ಒಳಪಡಿಸಿದ್ದಾರೆ. ಇದಾದ ಬಳಿಕವೇ ಆತ ಬ್ಲೂವೇಲ್ ಗೇಮ್‌ನಲ್ಲಿ ಸಿಲುಕಿರುವ ವಿಚಾರವೂ ಬೆಳಕಿಗೆ ಬಂದಿದೆ.
ಅಷ್ಟಾದರೂ ವಿಷಯ ಹೊರಜಗತ್ತಿಗೆ ತಿಳಿದಿರಲಿಲ್ಲ. ಆದರೆ, ಆ  ಶಾಲೆಯಲ್ಲಿ ಬ್ಲೂವೇಲ್ ಬಗ್ಗೆ ಎಚ್ಚರವಿರುವಂತೆ ಕರಪತ್ರಗಳನ್ನು ಹಂಚಲಾಯಿತು. ಶಿಕ್ಷಕರು  ಈ ಬಗ್ಗೆ ವಿದ್ಯಾರ್ಥಿಗಳು, ಪೋಷಕರಿಗೆ ಜಾಗೃತಿ ಮೂಡಿಸಿದ್ದಾರೆ. ಆಗಲೇ ವಿಚಾರ  ಬಾಯಿಂದ ಬಾಯಿಗೆ ಹರಡಿದೆ. ಇಂದಿನವರೆಗೂ ಪೊಲೀಸರಿಗೂ ಪ್ರಕರಣದ ಬಗ್ಗೆ ಯಾವುದೇ ಸುಳಿವಿರಲಿಲ್ಲ.  ಮಾಧ್ಯಮದ ಮೂಲಕ ತಿಳಿದುಬಂದ ತಕ್ಷಣ ಈ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸ್ ಕಮಿಷನರ್ ಟಿ. ಆರ್. ಸುರೇಶ್ ಹೇಳಿದ್ದಾರೆ.
ನಗರದಲ್ಲಿ ಬ್ಲೂವೇಲ್ ಗೇಮ್‌ನಿಂದ ವಿದ್ಯಾರ್ಥಿ ಅಪಾಯಕ್ಕೆ ಸಿಲುಕಿರುವ ಬಗ್ಗೆ ಪೊಲೀಸ್ ಇಲಾಖೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಪೋಷಕರಲ್ಲಿ ಧೈರ್ಯ ಹಾಗೂ ಮಕ್ಕಳಲ್ಲಿ ಜಗೃತಿ ಮೂಡಿಸುವ ಸಲುವಾಗಿ ಇಲಾಖೆಯಿಂದ ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ತಿಳಿಸಿದ್ದಾರೆ.

LEAVE A REPLY