ಸೂರ್ಯನ ಸುತ್ತ ಬಣ್ಣದ ಚಿತ್ತಾರ… ಅಚ್ಚರಿ ಮೂಡಿಸಿದ ಬೆಳಕಿನ ಬಳೆ!

ಗಂಗೊಳ್ಳಿ: ಶುಕ್ರವಾರ ಮಧ್ಯಾಹ್ನ ಆಗಸದಲ್ಲಿ ಸೂರ್ಯ ಎಂದಿನಂತೆ ಇರಲಿಲ್ಲ. ತನ್ನ ಸುತ್ತಲೂ ವೃತ್ತಾ ಕಾರದ ಕಂಕಣವನ್ನು ನಿರ್ಮಿಸಿ ನೋಡುಗರಲ್ಲಿ ಕೌತುಕ ಮೂಡಿಸಿದ್ದ.
ಮಧ್ಯಾಹ್ನ ಸುಮಾರು 12ಗಂಟೆ ಸುಮಾರಿಗೆ ಸೂರ್ಯ ನೆತ್ತಿಗೇರಿದ ಹೊತ್ತಿನಲ್ಲಿ ಸೂರ್ಯನ ಸುತ್ತಲೂ ಕಾಮನ ಬಿಲ್ಲಿನಂತಿರುವ ಆಕೃತಿ ಗಂಗೊಳ್ಳಿ, ಕುಂದಾಪುರ, ಬೈಂದೂರು ಸುತ್ತಮುತ್ತಲ ಪ್ರದೇಶ ಜನರ ಗಮನ ಸೆಳೆಯಿತು. ಎಲ್ಲರೂ ಸೂರ್ಯನನ್ನೇ ದಿಟ್ಟಿಸಿ ನೋಡುತ್ತಿದ್ದರೆ, ಇನ್ನು ಹಲವರು ಮೊಬೈಲ್‌ನಲ್ಲಿ ಈ ಚಿತ್ರವನ್ನು ಸೆರೆ ಹಿಡಿಯುತ್ತಿದ್ದ ದೃಶ್ಯ ಕಂಡು ಬಂತು. ಈ ಸುಂದರ ದೃಶ್ಯವನ್ನು ಗಂಗೊಳ್ಳಿಯ ಛಾಯಾಗ್ರಾಹಕ ಗಣೇಶ ಪಿ. ವೆಲ್‌ಕಮ್ ಸ್ಟುಡಿಯೋ ಗಂಗೊಳ್ಳಿ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದ್ದಾರೆ.
ಇದು ಪ್ರಕೃತಿ ಸೃಷ್ಟಿ 
ಸೂರ್ಯನ ಸುತ್ತಲೂ ಕಂಡು ಬರುವ ಕಾಮನಬಿಲ್ಲು ಪ್ರಕೃತಿಯ ಸೃಷ್ಟಿ. ಭೂಮಿಯಿಂದ ಸುಮಾರು 5ರಿಂದ 8 ಕಿ.ಮೀ. ಎತ್ತರದ ವಾತಾವರಣದಲ್ಲಿ ಹಿಮದ ಹರಳುಗಳು ನಿರ್ಮಾಣವಾಗಿ ಸೂರ್ಯನಿಂದ ಸುತ್ತಲೂ ಹರಿಯುವ ಬೆಳಕು ಹಿಮದ ಹರಳುಗಳ ಮೂಲಕ ಹಾಯುವಾಗ ಪ್ರತಿಫಲನ, ವಕ್ರೀಭವನ ಮತ್ತು ಚದುರುವಿಕೆಯ ಕ್ರಿಯೆಗಳು ನಡೆಯುವುದರಿಂದ ಸೂರ್ಯನ ಸುತ್ತ ಬಣ್ಣದ ಬಳೆಗಳು ಗೋಚರಿಸುತ್ತವೆ. ಇದು ಪ್ರಕತಿಯ ಸಹಜ ನಡುವಳಿಕೆಯಾದರೂ ಆಯಾ ಪ್ರದೇಶ ಮತ್ತು ವಾತಾವರಣದಗುವ ಪರಿಸ್ಥಿತಿಗೆ ಅನುಗುಣವಾಗಿ ಇದು ಸೃಷ್ಟಿಯಾಗುತ್ತದೆ. ವಾತಾವರಣದಲ್ಲಿ ನೀರಿನ ಪ್ರಮಾಣ ಹೆಚ್ಚಾದಾಗ ಮಧ್ಯಾಹ್ನದ ಸಮಯದಲ್ಲಿ ಈ ಬಣ್ಣದ ಬಳೆ ಸಷ್ಟಿಯಾಗುತ್ತದೆ.

LEAVE A REPLY