ಉಳ್ಳಾಲ: ದೇವಸ್ಥಾನದ ಬಳಿ ಬಸ್ಸಿನಡಿಗೆ ಬಿದ್ದು ಕೇರಳ ಮೂಲದ ವ್ಯಕ್ತಿ ಸಾವು

ಉಳ್ಳಾಲ: ಬಸ್ಸು ಅಪಘಾತದಲ್ಲಿ ಕೇರಳ ಮೂಲದ ವ್ಯಕ್ತಿಯೋರ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕುತ್ತಾರು ದೇವಸ್ಥಾನದ ಸಮೀಪ ಗುರುವಾರ ಸಂಜೆ ವೇಳೆ ಸಂಭವಿಸಿದೆ.
ಕೇರಳ ಪಯ್ಯನ್ನೂರು ನಿವಾಸಿ ವಳಸ್‌ರಾಜ್ (42) ಮೃತರು. ತಣ್ಣೀರುಬಾವಿಯಲ್ಲಿ ಸೆಲೂನ್ ಅಂಗಡಿಯನ್ನು ನಡೆಸುತ್ತಿರುವ ಇವರು ಅಲ್ಲಿಂದ ದೇರಳಕಟ್ಟೆಯ ಬಗಂಬಿಲದಲ್ಲಿರುವ ಸಹೋದರಿಯ ಮನೆಗೆ ಬರುವ ಸಂದರ್ಭ ಘಟನೆ ಸಂಭವಿಸಿದೆ. ಸೆಲೂನ್ ಅಂಗಡಿಯಿಂದ ವಾಪಸ್ಸಾಗುವ ಸಂದರ್ಭ ಸಹೋದರಿ ಪದ್ಮಾವತಿ ಅವರ ಪುತ್ರಿಗೆ ಕರೆ ಮಾಡಿ ಮನೆಗೆ ಬರುತ್ತಿರುವುದಾಗಿ ತಿಳಿಸಿದ್ದರು. ಆದರೆ ದಾರಿಮಧ್ಯೆ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಗೊಂದಲ
ಸ್ಥಳೀಯರ ಪ್ರಕಾರ ಮೂರು ರೀತಿಯಲ್ಲಿ ಘಟನೆ ನಡೆದಿದೆ. ಇದರಿಂದ ಪೊಲೀಸರಿಗೂ ಅಪಘಾತ ನಡೆದಿರುವ ಕುರಿತು ಗೊಂದಲ ಉಂಟಾಗಿದೆ. ಬಿ.ಸಿ.ರೋಡಿನಿಂದ ಮಂಗಳೂರು ಮಾರ್ಗವಾಗಿ ತೆರಳುವ ಸರ್ವಿಸ್ ಬಸ್ಸಿನ ಹಿಂಬದಿ ಚಕ್ರದಡಿ ಸಿಲುಕಿ ವಳಸ್‌ರಾಜ್ ತಲೆಯ ಭಾಗ ಜಜ್ಜಿಹೋಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದರೆ ದೇರಳಕಟ್ಟೆ ಕಡೆಗೆ ಬರುತ್ತಿದ್ದ ವಳಸ್‌ರಾಜ್ ಹಿಂಬದಿ ಚಕ್ರದಡಿ ಸಿಲುಕಿರುವ ಕಾರಣವೇ ಯಾರಿಗೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಹಲವರು ಬೈಕಿನಲ್ಲಿ ಬರುತ್ತಿದ್ದವರು ಜಾರಿಬಿದ್ದು ಬಸ್ಸಿನಡಿ ಬಿದ್ದಿದ್ದಾರೆ ಅನ್ನುತ್ತಿದ್ದರೆ, ಸ್ಥಳದಲ್ಲಿ ಯಾವುದೇ ಬೈಕ್ ಆಗಲಿ, ಅವರ ಪರಿಚಯಸ್ಥರಾಗಲಿ ಇರಲಿಲ್ಲ. ಇನ್ನು ಹಲವರು ರಸ್ತೆ ದಾಟುವ ಸಂದರ್ಭ ಬಸ್ಸಿನಡಿ ಬಿದ್ದು ಸಾವನ್ನಪ್ಪಿದ್ದಾರೆ ಅನ್ನುತ್ತಿದ್ದಾರೆ. ಆದರೆ ಬಗಂಬಿಲದಿಂದ ಬರುತ್ತಿದ್ದವರು ಕುತ್ತಾರು ಸಮೀಪ ಇಳಿಯಲು ಸಾಧ್ಯವೇ ಇಲ್ಲ ಅನ್ನುವ ಸಂಶಯಗಳು ವ್ಯಕ್ತವಾಗಿದೆ. ಪೊಲೀಸರಿಗೂ ಅಪಘಾತ ಸಂಭವಿಸಿರುವ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಬಸ್ಸು ಚಾಲಕನೂ ಸ್ಥಳದಿಂದ ಪರಾರಿಯಾದ ಹಿನ್ನೆಲೆಯಲ್ಲಿ ಪೊಲೀಸರಿಗೂ ಮಾಹಿತಿ ಸಂಗ್ರಹಿಸಲು ಕಷ್ಟವಾಗಿದೆ. ಘಟನೆಯಿಂದ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೂ ಅಡಚಣೆಯುಂಟಾಯಿತು.
ಮೃತರು ವಿವಾಹಿತರಾಗಿದ್ದು, ಓರ್ವ ಹೆಣ್ಣು ಮಗುವನ್ನು ಅಗಲಿದ್ದಾರೆ.

LEAVE A REPLY