ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಮಗುಚಿದ ಮೀನುಗಾರಿಕಾ ದೋಣಿ : ಇಬ್ಬರು ಪಾರು

ಗಂಗೊಳ್ಳಿ : ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಮೀನುಗಾರಿಕಾ ದೋಣಿಯೊಂದು ಮಗುಚಿ ಬಿದ್ದಿದ್ದು ಇಬ್ಬರು ಮೀನುಗಾರರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಗುರುವಾರ ಬೆಳಿಗ್ಗೆ ಗಂಗೊಳ್ಳಿ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆ ತೆರಳಿದ್ದ ಶ್ರೀ ಸಿದ್ಧಿವಿನಾಯಕ ಹೆಸರಿನ ಮೀನುಗಾರಿಕಾ ದೋಣಿಯು ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಅಳಿವೆಯ ಮರಳಿನ ದಿಣ್ಣೆಗೆ ಬಡಿದು ಮಗುಚಿ ಬಿದ್ದಿದೆ ಎನ್ನಲಾಗಿದೆ. ದೋಣಿಯಲ್ಲಿದ್ದ ಗಂಗೊಳ್ಳಿ ಸಮೀಪದ ಕಂಚುಗೋಡು ನಿವಾಸಿ ಭಾಸ್ಕರ ಖಾರ್ವಿ (40) ಮತ್ತು ಕರುಣಾ ಪೂಜಾರಿ (42) ಎಂಬವರನ್ನು ಇತರ ದೋಣಿಯಲ್ಲಿದ್ದ ಮೀನುಗಾರರು ರಕ್ಷಿಸಿದ್ದು, ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದುರಂತದಲ್ಲಿ ಗಾಯಗೊಂಡ ಭಾಸ್ಕರ ಖಾರ್ವಿ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೀಡಾದ ದೋಣಿಯನ್ನು ಕುಂದಾಪುರ ಸಮೀಪದ ಕೋಡಿ ಕಡಲ ಕಿನಾರೆಗೆ ಎಳೆದು ತರಲಾಗಿದ್ದು, ದೋಣಿ ಸಂಪೂರ್ಣವಾಗಿ ಹಾನಿಗೊಳಗಾಗಿದೆ.
ಅಳಿವೆ ಪ್ರದೇಶದಲ್ಲಿ ಹೂಳು ತುಂಬಿಕೊಂಡಿರುವುದರಿಂದ ಪ್ರತಿವರ್ಷ ಒಂದಲ್ಲ ಒಂದು ದುರಂತ ಅವಘಡಗಳು ಸಂಭವಿಸುತ್ತಿದ್ದು ಮೀನುಗಾರರ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ತುರ್ತಾಗಿ ಹೂಳೆತ್ತಬೇಕು ಮತ್ತು ಬಂದರಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಬ್ರೇಕ್ ವಾಟರ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಬೇಕು ಎಂದು ಸ್ಥಳೀಯ ಮೀನುಗಾರರು ಆಗ್ರಹಿಸಿದ್ದಾರೆ.

 

LEAVE A REPLY