ಕೊಳೆ ರೋಗದ ಮದ್ದಿಗೆ ಕರಾವಳಿಯಲ್ಲಿ ಮಳೆರಾಯನ ಗುದ್ದು!

ಪುತ್ತೂರು: ಕಳೆದ ಕೆಲವು ದಿನಗಳ ಬಳಿಕ ಮತ್ತೆ ಮಳೆ ಜೋರಾಯ್ತು. ಜಿಲ್ಲೆಯ ವಿವಿದೆಡೆ ಅಡಿಕೆಗೆ ಕೊಳೆರೋಗ ಕಾಣಿಸಿಕೊಂಡಿದೆ. ಈಗ ಎರಡು ದಿನಗಳ ಮಳೆ ಮತ್ತೆ ಅಡಿಕೆ ಬೆಳೆಗಾರರಿಗೆ ಭಯ ಶುರುಮಾಡಿದೆ.
ಕೃಷಿಕರು ಈಗ ಸಾಮಾನ್ಯವಾಗಿ ಕೇಳುವ ಪ್ರಶ್ನೆ, ನಿಮ್ಮಲ್ಲಿ ಕೊಳೆರೋಗ ಇದ್ಯಾ? ಜಿಲ್ಲೆಯ ವಿವಿದೆಡೆ ಈಗ ಅಡಿಕೆಗೆ ಕೊಳೆರೋಗದ ಸುದ್ದಿ ಹೆಚ್ಚಾಗಿದೆ. ಸುಳ್ಯ, ಪುತ್ತೂರು, ಬಳ್ತಂಗಡಿ ಪ್ರದೇಶದ ವಿವಿಧ ಕಡೆಗಳಲ್ಲಿ ಆಗಸ್ಟ್ ತಿಂಗಳ ಮಧ್ಯಭಾಗದಿಂದ ಕೊಳೆರೋಗ ಕಾಣಿಸಿಕೊಂಡಿದೆ. ಜೂನ್ ಆರಂಭದಿಂದ ನಿಗದಿತ ಪ್ರಮಾಣದಲ್ಲಿ ಮಳೆಯಾಗದೇ ಇದ್ದರೂ ಇದೀಗ ಒಮ್ಮೆಲೇ ಮಳೆಯ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಕೊಳೆರೋಗದ ಲಕ್ಷಣಗಳು ಕಾಣಿಸಿಕೊಂಡಿದೆ. ಈಗ ಅಡಿಕೆ ಬಲಿತಿರುವುದರಿಂದ ರೋಗವೂ ಅತ್ಯಂತ ವೇಗವಾಗಿ ಹರಡುತ್ತಿದೆ. ಹೀಗಾಗಿ ಸಮಸ್ಯೆಯಾಗಿದೆ. ಕೊಳೆರೋಗಕ್ಕೆ ಔಷಧಿ ಸಿಂಪಡಣೆಯ ನಂತರವೂ ಇದೀಗ ರೋಗ ಕಾಣಿಸಿಕೊಂಡಿದೆ. ಕೊಳೆರೋಗ ನಿಯಂತ್ರಣಕ್ಕಾಗಿ ಬೋರ್ಡೋ ದ್ರಾವಣವನ್ನೇ ಬೆಳೆಗಾರರು ನೆಚ್ಚಿಕೊಂಡಿರುವ ಕಾರಣ ಸರಿಯಾಗಿ ೩೦ ದಿನದ ನಂತರ ಎರಡನೇ ಸುತ್ತಿನ ಸಿಂಪಡಣೆಗೆ ಈಗ ಮಳೆಯಿಂದಾಗಿ ಅವಕಾಶವೇ ಸಿಗುತ್ತಿಲ್ಲ. ಹೀಗಾಗಿ ಬೆಳೆಗಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದೀಗ ಹುಬ್ಬಾ ನಕ್ಷತ್ರ ಆರಂಭವಾಗಿದ್ದು ಉತ್ತಮ ಮಳೆಯಾಗುವ ಸಂಭವ ಇದೆ. ಈ ಹಿಂದೆ ಮಘಾ ನಕ್ಷತ್ರದಲ್ಲಿ ಕೂಡಾ ಉತ್ತಮ ಮಳೆಯಾಗಿದೆ.
ಪ್ರತೀ ಬಾರಿಯೂ ಕೂಡಾ ಜುಲೈ ನಂತರ ಅಡಿಕೆಗೆ ಶಿಲೀಂದ್ರದಿಂದ ಬರುವ ಕೊಳೆರೋಗ ಕಾಣಿಸಿಕೊಂಡು ಬೆಳೆಗಾರರು ಸಂಕಷ್ಟಕ್ಕೆ ಒಳಗಾಗುವುದಾದರೆ ಈ ಬಾರಿ ಆಗಸ್ಟ್ ಅಂತ್ಯದಲ್ಲಿ ಕೊಳೆರೋಗ ಹರಡಿದೆ. ತೋಟದ ಅಲ್ಲಲ್ಲಿ ಕೊಳೆರೋಗದ ಲಕ್ಷಣಗಳು ಇದೆ ಎಂದು ಬೆಳೆಗಾರರು ಹೇಳುತ್ತಿದ್ದು ನಿಯಂತ್ರಣಕ್ಕೆ ಬಂದಿಲ್ಲ.

LEAVE A REPLY