ಮಿಸೈಲ್ ಲಾಂಚ್ ಮಾಡಿದ್ರೆ ಹುಷಾರ್: ಉ.ಕೊರಿಯಾಗೆ ವಿಶ್ವ ಸಂಸ್ಥೆ ಎಚ್ಚರಿಕೆ

ವಿಶ್ವಸಂಸ್ಥೆ: ಜಪಾನ್ ಮೇಲೆ ಬಾಲಿಸ್ಟಿಕ್ ಮಿಸೈಲ್ ಹಾರಿಸಿದ ಉತ್ತರ ಕೊರಿಯಾದ ಅತಿರೇಕದ ನಡೆಯನ್ನು ಖಂಡಿಸಿರುವ ವಿಶ್ವ ಸಂಸ್ಥೆ ಭದ್ರತಾ ಮಂಡಳಿ, ಉತ್ತರ ಕೊರಿಯಾ ಇನ್ನು ಮುಂದೆ ಯಾವುದೇ ಮಿಸೈಲ್‌ಗಳನ್ನು ಲಾಂಚ್ ಮಾಡುವಂತಿಲ್ಲ ಮತ್ತು ಎಲ್ಲಾ ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಕಾರ್ಯಕ್ರಮಗಳನ್ನು ನಿಶೇಧಿಸಬೇಕು ಎಂದು ಆಗ್ರಹಿಸಿದೆ. ಆತಂಕವನ್ನು ಕಡಿಮೆ ಮಾಡಲು ಉತ್ತರ ಕೊರಿಯಾ ತಕ್ಷಣವೇ ಕ್ರಮ ಕೈಗೊಳ್ಳುವುದು ತುಂಬಾ ಪ್ರಾಮುಖ್ಯತೆ ಹೊಂದಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ.
ಶಾಂತಿಯುತ, ರಾಜತಾಂತ್ರಿಕ ಮತ್ತು ರಾಜಕೀಯ ಪರಿಹಾರಕ್ಕಾಗಿ ತನ್ನ ಬದ್ಧತೆಯನ್ನು ಸಮಿತಿ ವ್ಯಕ್ತಪಡಿಸಿದೆ. ಉತ್ತರ ಕೊರಿಯಾ ಅತಿರೇಕದ ಕ್ರಮವು ಕೇವಲ ಆ ಪ್ರದೇಶಕ್ಕೆ ಸೀಮಿತವಾದ ಬೆದರಿಕೆಯಲ್ಲ, ಎಲ್ಲಾ ವಿಶ್ವ ಸಂಸ್ಥೆ ಸದಸ್ಯ ರಾಷ್ಟ್ರಗಳಿಗೂ ಇದು ಬೆದರಿಕೆ ಎಂದು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಜಪಾನ್ ಮೇಲೆ ಕೊರಿಯಾ ತೆಗೆದುಕೊಂದ ಕ್ರಮಕ್ಕೆ ಹಾಗೂ ಇತ್ತೀಚೆಗೆ ಕೊರಿಯಾ ನೀಡುತ್ತಿರುವ ಸಾರ್ವಜನಿಕ ಹೇಳಿಕೆಗಳ ಬಗ್ಗೆಯೂ ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಕಳವಳ ವ್ಯಕ್ತಪಡಿಸಿದ್ದು, ಇದು ಪ್ರಾಂತ್ಯದಲ್ಲಿ ಉದ್ದೇಶ ಪೂರಿಯವಾಗಿ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕೆಡಿಸುತ್ತದೆ ಎಂದು ಹೇಳಿದೆ. ಈ ಮಧ್ಯೆ ವಿಶ್ವಸಂಸ್ಥೆಯ ಹೇಳಿಕೆಗೆ ಸಮ್ಮತಿ ಸೂಚಿಸಿರುವ ಅಮೆರಿಕ, ಕೊರಿಯಾ ಮೇಲೆ ಯಾವುದೇ ಹೊಸ ನಿರ್ಬಂಧಗಳನ್ನು ಹೇರುವುದಿಲ್ಲ ಎಂದು ಹೇಳಿದೆ.
ಇತ್ತ ಉತ್ತರ ಕೊರಿಯಾ ಆಪ್ತ ರಾಷ್ಟ್ರವಾಗಿರುವ ಚೀನಾವೂ ಕೊರಿಯಾದ ಪ್ರತಿಕ್ರಿಯೆಗಾಗಿ ಕಾಯುತ್ತಿದೆ. ಕ್ಷಿಪಣೆ ಉಡಾವಣೆ ಮಾಡಿರುವುದರ ಬಗ್ಗೆ ಏನು ಹೇಳುತ್ತದೆ ಎಂಬುದರ ಬಗ್ಗೆ ಚೀನಾ ರಕ್ಷಣಾ ಸಂಸ್ಥೆಯು ಕಾಯುತ್ತಿದೆ. ಇಷ್ಟಾಗಿಯೂ ಕೊರಿಯಾದ ಇತ್ತಿಚಿನ ಬೆಳವಣಿಗೆಗಳ ಬಗ್ಗೆ ಇನ್ನಿತರೆ ರಾಷ್ಟ್ರಗಳೊಂದಿಗೆ ಚರ್ಚೆ ಮಾಡುತ್ತಿರುವುದಾಗಿಯೂ ಚೀನಾ ಹೇಳಿಕೊಂಡಿದೆ.

LEAVE A REPLY