ಶೇ.೨೫ಕ್ಕೆ ಜಿಎಸ್‌ಟಿ ಸೆಸ್ ಹೆಚ್ಚಳ : ಐಷಾರಾಮಿ ಕಾರುಗಳು ದುಬಾರಿ

ಹೊಸದಿಲ್ಲಿ: ಹೊಸ ಜಿಎಸ್‌ಟಿ ತೆರಿಗೆ ಆಡಳಿತದಲ್ಲಿ ಐಷಾರಾಮಿ ಕಾರುಗಳ ಮೇಲಿನ ಹೆಚ್ಚುವರಿ ಸೆಸ್ ದರವನ್ನು ಶೇ.15ರಿಂದ ಶೇ.25ಕ್ಕೆ ಹೆಚ್ಚಿಸುವುದನ್ನು ಬುಧವಾರ ಕೇಂದ್ರ ಸಂಪುಟ ಅನುಮೋದಿಸಿದೆ. ಹೀಗಾಗಿ ಎಸ್‌ಯುವಿ, ಮಧ್ಯಮ ಗಾತ್ರ, ದೊಡ್ಡ ಮತ್ತು ಐಷಾರಾಮಿ ಕಾರುಗಳು ದುಬಾರಿಯಾಗಲಿವೆ.
ಪ್ರಸ್ತುತ ಐಷಾರಾಮಿ ಕಾರುಗಳು ಮಾರಾಟದಲ್ಲಿ ಪಾವತಿಸುವ ತೆರಿಗೆಗೆ ಇದು ಹೆಚ್ಚುವರಿ ತೆರಿಗೆಯಾದ ಕಾರಣದಿಂದ ಐಷಾರಾಮಿ ಕಾರು ಸಂಸ್ಥೆಗಳು ದುಬಾರಿಯಾಗುವುದು ಖಂಡಿತ. ಪ್ರಸ್ತುತ ಐಷಾರಾಮಿ ಕಾರುಗಳ ಮೇಲೆ ಸೆಸ್ ಸಹಿತ ಒಟ್ಟು ತೆರಿಗೆ ಶೇ.43 ಹೇರಲಾಗುತ್ತಿದ್ದು, ಇನ್ನು ಮುಂದೆ ಅದು ಶೇ.53ಕ್ಕೆ ಏರಿಕೆಯಾಗುತ್ತದೆ. ಕೇಂದ್ರ ಸಂಪುಟ ಸಭೆಯಲ್ಲಿ ಐಷಾರಾಮಿ ಕಾರುಗಳ ಮೇಲಿನ ಸೆಸ್ ಏರಿಕೆ ಪ್ರಸ್ತಾವವನ್ನು ಅಂಗೀಕರಿಸಲಾಗಿದೆ.
ಜು.1ರಂದು ಜಿಎಸ್‌ಟಿ ಅನುಷ್ಠಾನಕ್ಕೆ ಬಂದಾಗ ಎಲ್ಲಾ ಐಷಾರಾಮಿ ಕಾರುಗಳು ಅಗ್ಗವಾಗಿದ್ದವು, ಹೀಗಾಗಿ ಆ.5ರಂದು ಜಿಎಸ್‌ಟಿ ಸಮಿತಿ ಐಷಾರಾಮಿ ಕಾರುಗಳ ಮೇಲೆ ಸೆಸ್ ದರ ಹೆಚ್ಚಿಸುವ ಪ್ರಸ್ತಾಪವನ್ನು ಅಂಗೀಕರಿಸಿತ್ತು. ಆದರೆ, ಸೆಸ್ ಹೆಚ್ಚಿಸಬೇಕಾದರೆ ಜಿಎಸ್‌ಟಿ ಕಾಯ್ದೆ-2017ರ ಸೆಕ್ಷನ್ 8ರಲ್ಲಿ ಒಂದು ತಿದ್ದುಪಡಿ ಮಾಡುವ ಅವಶ್ಯಕತೆಯಿದೆ.
ಜಿಎಸ್‌ಟಿ ಅನುಷ್ಠಾನದ ಬಳಿಕ 1.1-3 ಲಕ್ಷ ರೂ. ತನಕ ಎಸ್‌ಯುವಿ ಕಾರುಗಳ ದರ ಇಳಿಕೆಯಾಗಿದ್ದವು. ಇದೀಗ ಸೆಸ್ ಹೆಚ್ಚಳದಿಂದ ಇಳಿಕೆಯಾಗಿದ್ದ ದರಗಳು ವ್ಯತಿರಿಕ್ತವಾಗಿ ಪರಿಣಮಿಸಲಿವೆ. ಕಾರುಗಳ ಮೇಲೆ ಗರಿಷ್ಟ ಶೇ.28 ತೆರಿಗೆ ಹೇರಲಾಗಿದೆ. ಅದಲ್ಲದೇ, ಹೆಚ್ಚುವರಿ ಸೆಸ್ ರೂಪದಲ್ಲಿ ಶೇ.1-15ರಷ್ಟು ತೆರಿಗೆ ಹೇರಲಾಗುತ್ತಿದೆ. ಜಿಎಸ್‌ಟಿ ಸಮಿತಿಯ ಮುಂದಿನ ಸಭೆ ಸೆ.9ರಂದು ನಡೆಯಲಿದ್ದು, ಸೆಸ್ ಹೆಚ್ಚಳ ಯಾವಾಗ ಜಾರಿಯಾಗುತ್ತದೆ ಎಂದು ಘೋಷಿಸುವ ಸಾಧ್ಯತೆಯಿದೆ.

LEAVE A REPLY