ಚೀನಾ ಅಧಿಕಾರಿಗಳ ಬೆವರಿಳಿಸಿದ್ದ ಡೋಕ್ಲಾಂ ಬಿಕ್ಕಟ್ಟು ಶಮನದ ಹಿಂದಿನ ಪ್ರಮುಖ ಪಾತ್ರಧಾರಿ ದೋವಲ್!

ಹೊಸದಿಲ್ಲಿ: ಭಾರತ ಹಾಗೂ ಚೀನಾ ನಡುವೆ ಉದ್ಭವಿಸಿದ್ದ ಡೋಕ್ಲಾಂ ಬಿಕ್ಕಟ್ಟು ಯುದ್ಧದಿಂದಲೇ ಅಂತ್ಯವಾಗುತ್ತೆ ಅಂತ ಬಹುತೇಕರು ಯೋಚಿಸಿದ್ದರು. ಅಷ್ಟೇ ಏಕೆ, ಇವತ್ತೋ ನಾಳೆಯೋ ಯುದ್ಧ ನಡೆದೇಬಿಟ್ಟಿತು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಅದ್ಯಾವುದು ಆಗದೇ ಶಾಂತವಾಗಿ ಈ ಒಂದು ಬಿಕ್ಕಟ್ಟು ಶಮನವಾಗುವುದರ ಹಿಂದೆ ಅಜಿತ್ ದೋವಲ್ ಪಾತ್ರ ದೊಡ್ಡದಿದೆ. ಹೇಗೆ? ಇಲ್ಲಿದೆ ಓದಿ:
ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್ ಅವರು ಅನುಸರಿಸಿದ ನೀತಿಗಳು ಚೀನಾಕ್ಕೆ ಅದರದ್ದೇ ರೀತಿಯಲ್ಲಿ ಉತ್ತರ ನೀಡಿ ತಕ್ಕ ಪಾಠವನ್ನು ಕಲಿಸಿದರು.
ವಿವಾದಿತ ಪ್ರದೇಶ ಡಿಫಾಲ್ಟ್ ಆಗಿ ಚೀನಾದ್ದಾ?
ಬಿಕ್ಕಟ್ಟಿನ ಬಗ್ಗೆ ಮಾತುಕತೆ ನಡೆಸುವ ವೇಳೆ ಡೋಕ್ಲಾಂ ನಿಮ್ಮ ಪ್ರದೇಶವೇ ಎಂದು ಚೀನಾ ಕೌನ್ಸಿಲರ್ ಯಾಂಗ್ ಜೈಚಿ ಬ್ಲಂಟ್ ಅವರು ಪ್ರಶ್ನೆ ಮಾಡಿದ್ದರು. ಜುಲೈ ೨೭ ರಂದು ಉಭಯ ದೇಶಗಳ ನಡುವೆ ನಡೆದ ಸಭೆಯ ವೇಳೆ ಚೀನಾದ ಕೌನ್ಸಿಲರ್ ದೋವಲ್ ಅವರ ಮುಂದೆ ಈ ಪ್ರಶ್ನೆಯನ್ನು ಇರಿಸಿದ್ದರು. ಭೂತಾನ್-ಭಾರತ ಹಾಗೂ ಚೀನಾ ನಡುವಿನ ತ್ರಿಸಂ ಪ್ರದೇಶದಲ್ಲಿ ರಸ್ತೆಯನ್ನು ನಿರ್ಮಾಣ ಮಾಡಲು ತೆರಳಿ ಸಮಸ್ಯೆಯೊಂದನ್ನು ಚೀನಾ ಹುಟ್ಟುಹಾಕಿತ್ತು. ಇದಕ್ಕೆ ಉತ್ತರಿಸಿದ್ದ ದೋವಲ್, ಎಲ್ಲಾ ವಿವಾದಿತ ಪ್ರದೇಶಗಳೂ ಕೂಡ ಡಿಫಾಲ್ಟ್ ಆಗಿ ಚೀನಾದ ಭೂಭಾಗ ಆಗಿ ಬಿಡುತ್ತದೆಯೇ ಎಂದು ಮರು ಪ್ರಶ್ನೆ ಮಾಡಿದ್ದರು.
ಅಲ್ಲದೆ, ಈ ಪ್ರದೇಶವು ಭೂತಾನ್‌ಗೆ ಸೇರಿದ ಪ್ರದೇಶದ ಒಳಗೆ ರಸ್ತೆ ನಿರ್ಮಾಣ ಮಾಡುವ ಮೂಲಕ ಮೂರು ದೇಶಗಳಿಗೆ ಸೇರಿದ ಪ್ರದೇಶದಲ್ಲಿದ್ದ ಸ್ಥಿತಿಗತಿಯು ಹಾಳಾಗಲು ಚೀನಾ ಕಾರಣವಾಗಿದೆ ಎಂದು ಅವರು ಹೇಳಿದ್ದರು. ಮತ್ತು ಹಿಮಾಲಯನ್ ಆಡಳಿತಗಾರರೊಂದಿಗಿನ ಒಪ್ಪಂದದ ಬಳಿಕವೇ ಇಲ್ಲಿನ ಭದ್ರತೆಯತ್ತ ಭಾರತ ಕ್ರಮ ಕೈಗೊಂಡಿತ್ತು ಎಂದೂ ಕೂಡ ಅವರು ಹೇಳಿದ್ದರು.
ಡೋಕ್ಲಾಂ ಬಗೆಗಿನ ಗಡಿ ವಿವಾದದ ಬಗ್ಗೆ ಅನೇಕ ಬಾರಿ ಚೀನಾವೂ ಭೂತಾನ್‌ನೊಂದಿಗೆ ಸಭೆ ನಡೆಸಿದ ಬಗ್ಗೆಯೂ ಕೂಡ ಅವರು ಪ್ರಸ್ತಾಪ ಮಾಡಿದ್ದರು. ಇನ್ನು ಈ ಡೋಕ್ಲಾಂ ಭಾಗದ ಬದಲಾಗಿ ಭೂತಾನ್ ಉತ್ತರ ಭಾಗದಲ್ಲಿರುವ ೫೦೦ ಕಿ.ಮೀ ಪ್ರದೇಶವನ್ನು ಹಸ್ತಾಂತರ ಮಾಡುವ ಬಗ್ಗೆ ಚೀನಾವೂ ಹೇಳಿತ್ತು ಎನ್ನುವ ಬಗ್ಗೆಯೂ ದೋವಲ್ ಅವರು ತಿಳಿಸಿದ್ದರು.
ಡೋಕ್ಲಾಂ ಬಗ್ಗೆ ಚೀನಾ ಹಾಗೂ ಭಾರತದ ನಡುವೆ ಕಳೆದ ಅನೇಕ ದಿನಗಳಿಂದಲೂ ಕೂಡ ಭಾರೀ ವಿವಾದ ಎದುರಾಗಿದ್ದು, ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಶತ ಪ್ರಯತ್ನ ನಡೆಸಲಾಗಿತ್ತು. ವಿದೇಶಾಂಗ ಕಾರ್ಯದರ್ಶಿ ಎಸ್. ಜಯಶಂಕರ್ ಹಾಗೂ ಚೀನಾದ ಭಾರತೀಯ ರಾಯಭಾರಿ ವಿಜಯ್ ಗೋಯಲ್ ಅವರು ಕೂಡ ಬೀಜಿಂಗ್‌ನಲ್ಲಿ ಅನೇಕ ರೀತಿಯ ಕ್ರಮಗಳನ್ನು ಕೈಗೊಂಡಿದ್ದರು. ಸಮಸ್ಯೆ ಬಗೆಹರಿಸುವುದು ನಮ್ಮ ಮೊದಲ ಆದ್ಯತೆಯಾಗಿತ್ತು ಎಂದು ಹೇಳಿದ್ದರು.
ಕಳೆದ ಜು.7ರಂದು ಜಿ20 ಶೃಂಗ ಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಗೆ ಭೇಟಿ ನೀಡಿದ್ದ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಬಳಿ ಈ ಬಗ್ಗೆ ಮಾತುಕತೆ ನಡೆಸಿದ್ದರು. ಎನ್‌ಎಸ್‌ಎ ಮಟ್ಟದಲ್ಲಿ ಮಾತುಕತೆ ನಡೆಸುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಇದು ಅಕ ಪ್ರಮಾಣದಲ್ಲಿ ಉಲ್ಬಣವಾಗಲು ಅವಕಾಶ ನೀಡಬಾರದು ಎಂದು ಹೇಳಿದ್ದರು.
ಬಳಿಕ ಉಭಯ ದೇಶಗಳು ಮಾತುಕತೆ ನಡೆಸುವ ಮೂಲಕ ಸದ್ಯ ಸಮಸ್ಯೆ ತಣ್ಣಗಾಗಿದೆ. ಅಲ್ಲದೆ, ಉಭಯ ದೇಶಗಳು ಕೂಡ ಡೋಕ್ಲಾಂನಿಂದ ತಮ್ಮ ತಮ್ಮ ಸೇನಾ ಪಡೆಗಳನ್ನು ವಾಪಸ್ ಕರೆಸಿಕೊಂಡಿವೆ.

LEAVE A REPLY