ಮತ್ತೂ 50 ವ್ಯರ್ಥ ಖಾತೆಗಳು: ಕ್ರಮಕ್ಕೆ ಬ್ಯಾಂಕ್‌ಗಳಿಗೆ ಆರ್‌ಬಿಐ ನಿರ್ದೇಶನ

ಮುಂಬೈ: 2 ಲಕ್ಷ ಕೋಟಿ ರೂ.ಗಿಂತಲೂ ಅಧಿಕ ಸುಸ್ತಿ ಸಾಲವಿರುವ 50 ವ್ಯರ್ಥ ಖಾತೆಗಳನ್ನು ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚಿಸಿದ್ದು, ಅವುಗಳ ಪ್ರಕರಣದಲ್ಲಿ ಮುಂದಿನ 3 ತಿಂಗಳೊಳಗೆ ಯಾವುದೇ ಪರಿಹಾರವಾಗದಿದ್ದರೆ ಆ 50 ವ್ಯರ್ಥ ಖಾತೆಗಳ ಮೇಲೆ ದಿವಾಳಿತನ ಪ್ರಕ್ರಿಯೆ ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ದೇಶಿಸಿದೆ.
ಹೆಚ್ಚುತ್ತಿರುವ ಸುಸ್ತಿ ಕಾರ್ಪೊರೇಟ್ ಸಾಲಗಳ ಸಮಸ್ಯೆಯಿಂದ ದೇಶದ ಬ್ಯಾಂಕಿಂಗ್ ವಲಯ ಬಳಲುತ್ತಿದ್ದು, ದೇಶವನ್ನು ಈ ಸಮಸ್ಯೆಯಿಂದ ಹೊರತರುವ ಪ್ರಯತ್ನ ಆರ್‌ಬಿಐ ಮಾಡುತ್ತಿದೆ. ಇದೀಗ ಆರ್‌ಬಿಐ ಎರಡನೇ ಬಾರಿಗೆ ವ್ಯರ್ಥ ಬ್ಯಾಂಕ್ ಖಾತೆಗಳನ್ನು ಪಟ್ಟಿ ಮಾಡಿದೆ. ಈ ಮೊದಲು ಕೂಡ 12 ಖಾತೆಗಳ ಹೆಸರು ಬಹಿರಂಗ ಮಾಡಿತ್ತು.
ಆರ್‌ಬಿಐನ ಈ ನಡೆ ಪ್ರವರ್ತಕರ ಮೇಲೆ ಒತ್ತಡ ಹೇರುವುದಲ್ಲದೇ ಬ್ಯಾಂಕ್‌ಗಳ ಮೇಲೆಯೂ ಒತ್ತಡ ಹೇರುತ್ತದೆ. ಆರ್‌ಬಿಐ ನಡೆಯಿಂದಾಗಿ ಬ್ಯಾಂಕ್‌ಗಳು ದಿವಾಳಿತನ ಪ್ರಕ್ರಿಯೆ ಕಾನೂನು ಕ್ರಮದ ಅಡಿಯಲ್ಲಿ ಬರುವ ವ್ಯರ್ಥ ಖಾತೆಗಳ ಮೇಲೆ ಹೆಚ್ಚಿನ ಗಮನಹರಿಸುವಂತೆ ಮಾಡುತ್ತದೆ.
ಪ್ರತೀ ಬ್ಯಾಂಕ್‌ಗಳಿಗೆ ಆರ್‌ಬಿಐನಿಂದ ವ್ಯರ್ಥ ಖಾತೆಗಳ ಪ್ರತ್ಯೇಕ ಪಟ್ಟಿ ಲಭಿಸಿದೆ ಎಂದು ಹಿರಿಯ ಬ್ಯಾಂಕ್ ಅಕಾರಿ ಹೇಳಿದ್ದಾರೆ. 2 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಸುಸ್ತಿ ಸಾಲ ಹೊಂದಿರುವ ಒಟ್ಟು ೪೫-೫೦ ಕಾರ್ಪೊರೇಟ್ ಬ್ಯಾಂಕ್ ಖಾತೆಗಳು ಈ ಪಟ್ಟಿಯಲ್ಲಿವೆ ಎಂದು ಅಂದಾಜಿಸಲಾಗಿದೆ.
ಈ ಹಿಂದೆ ಜೂನ್ ತಿಂಗಳಲ್ಲಿ ಆರ್‌ಬಿಐ 2.5 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಸುಸ್ತಿ ಸಾಲ ಹೊಂದಿರುವ ಮೊದಲ 12 ಬ್ಯಾಂಕ್ ಖಾತೆಗಳ ಪಟ್ಟಿಯನ್ನು ಬ್ಯಾಂಕ್‌ಗಳಿಗೆ ಕಳುಹಿಸಿತ್ತು. ಹೊಸ ಪಟ್ಟಿಯಲ್ಲಿರುವ 50 ವ್ಯರ್ಥ ಖಾತೆಗಳಲ್ಲಿ ವೀಡಿಯೋಕಾನ್ ಇಂಡಸ್ಟ್ರೀಸ್, ಉತ್ತಮ್ ಗಲ್ವಾ, ಎಸ್ಸಾರ್ ಪ್ರಾಜೆಕ್ಟ್ ಮತ್ತು ರುಚಿ ಸೋಯ ಎಂಬೀ ಸಂಸ್ಥೆಗಳ ಇವೆ ಎನ್ನಲಾಗಿದೆ. ಈ ಕಂಪೆನಿಗಳು ಈಗಾಗಲೇ ಜೂನ್‌ನಲ್ಲಿ ದೇಶದ ಶೇ.60ರಷ್ಟು ಬ್ಯಾಂಕ್‌ಗಳಲ್ಲಿ ಎನ್‌ಪಿಎ ಪಟ್ಟಿಯಲ್ಲಿ ಸೇರಿಸಲಾಗಿತ್ತು.
ಆರ್‌ಬಿಐ ಡಿ.13ರ ಅಂತಿಮ ಗಡುವು ನೀಡಿದ್ದು, ಬ್ಯಾಂಕ್‌ಗಳು ಆ ಖಾತೆಗಳಿಂದ ಸುಸ್ತಿ ಸಾಲಕ್ಕೆ ಯಾವುದಾದರೂ ಪರಿಹಾರ ಕಂಡುಹಿಡಿಯಬೇಕು. ಇಲ್ಲವಾದರೆ ಬ್ಯಾಂಕ್‌ಗಳು ಡಿ.31ರೊಳಗೆ ದಿವಾಳಿತನ ಪ್ರಕ್ರಿಯೆ ಕ್ರಮ ತೆಗೆದುಕೊಳ್ಳಬೇಕು ಎಂದು ಈ ಬೆಳವಣಿಗೆಯನ್ನು ಅರಿತ ಹಿರಿಯ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY