ಬೆಂಗಳೂರಿಗೆ ನೇತ್ರಾವತಿ ನೀರು: ಸರಕಾರಕ್ಕೆ ಮತ್ತೊಂದು 2500 ಕೋಟಿ ರೂ.ಗಳ ಯೋಜನಾ ವರದಿ!

ಬೆಂಗಳೂರು: ಸಮುದ್ರ ಸೇರುವ ನದಿ ನೀರಿಗೆ ಅಡ್ಡಲಾಗಿ ಕರಾವಳಿಯಲ್ಲಿ ಜಲಾಶಯ ನಿರ್ಮಿಸುವಂತೆ ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್ ಇಂಜಿನಿಯರ್ ಪ್ರೊ.ಟಿ.ಜಿ. ಸೀತಾರಾಂ ನೇತೃತ್ವದ ವಿಜ್ಞಾನಿಗಳ ತಂಡವು ಸರ್ಕಾರಕ್ಕೆ ವರದಿ ನೀಡಿದೆ.
ಬುಧವಾರ ವಿಧಾನಸೌಧದಲ್ಲಿ ಸಚಿವರಾದ ಕೆ.ಜೆ. ಜಾರ್ಜ್, ರೋಶನ್‌ಬೇಗ್ ಸಮ್ಮುಖದಲ್ಲಿ ವರದಿ ಸಲ್ಲಿಸಿದ ವಿಜ್ಞಾನಿಗಳ ತಂಡವು, ವರದಿಯಲ್ಲಿನ ಅಂಶಗಳ ಕುರಿತು ವಿವರಣೆ ನೀಡಿತು.
ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಶ್ಚಿಮ ದಿಕ್ಕನೆಡೆಗೆ ಹರಿದು ಸಮುದ್ರ ಸೇರುವ ನೇತ್ರಾವತಿ ಮೊದಲಾದ ನದಿಗಳಿಗೆ ಅಡ್ಡಲಾಗಿ ಮಂಗಳೂರಿನಲ್ಲಿ ಅಣೆಕಟ್ಟು ಕಟ್ಟಬೇಕು. ಪ್ರವಾಹೋಪಾದಿಯಲ್ಲಿ ಹರಿಯುವ ನೀರನ್ನು ಇಲ್ಲಿ ಶೇಖರಿಸಿಡಬೇಕು. ಅದನ್ನು ಸಂಸ್ಕರಿಸಿದ ಬಳಿಕ ಕುಡಿಯುವ ನೀರಿನ ಸಲುವಾಗಿ ಬೆಂಗಳೂರಿಗೆ ಹರಿಸಬಹುದು ಎಂದು ವರದಿಯಲ್ಲಿ ತಿಳಿಸಿದೆ.
ಪ್ರತಿ ವರ್ಷ ಸುಮಾರು 240 ಟಿಎಂಸಿಯಷ್ಟು ನೀರು ಸಮುದ್ರಕ್ಕೆ ಹರಿದುಹೋಗುತ್ತಿದೆ. ಬೆಂಗಳೂರಿಗೆ ವಾರ್ಷಿಕ 20 ಟಿಎಂಸಿ ನೀರು ಬೇಕಿದ್ದು, ಮಂಗಳೂರಿಗೆ 2.1 ಟಿಎಂಸಿ ನೀರಿನ ಅಗತ್ಯವಿದೆ. ಹೀಗಾಗಿ ಮಂಗಳೂರಿನಲ್ಲಿ ಜಲಾಶಯ ನಿರ್ಮಿಸಿದರೆ, ಸರಾಸರಿ 24 ಟಿಎಂಸಿಯಷ್ಟು ನೀರನ್ನು ಶೇಖರಿಸಬಹುದು. ಇದನ್ನು ಸಂಸ್ಕರಿಸಿದರೆ, ಎರಡೂ ಮಹಾನಗರಗಳಿಗೆ ಕುಡಿಯುವ ನೀರು ಪೂರೈಸಬಹುದು. ನೀರು ಸಂಸ್ಕರಣೆಗೆ ಹಾಂಗ್‌ಕಾಂಗ್, ಚೀನಾ, ಬ್ರಿಟನ್, ಜರ್ಮನಿಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಈಗಾಗಲೇ ಅಳವಡಿಸಿಕೊಂಡಿದ್ದು, ಇದರಿಂದ ಪರಿಸರದ ಮೇಲೆ ಯಾವುದೇ ಪರಿಣಾಮ ಬೀರುವುದರಿಲ್ಲ. ಜನರನ್ನು ಸ್ಥಳಾಂತರಿಸುವ ಅವಶ್ಯಕತೆ ಇಲ್ಲ. ಹರಿಯುವ ನದಿಗೆ ಯಾವ ಅಡ್ಡಿಯೂ ಉಂಟಾಗುವುದಿಲ್ಲ. ಮಣ್ಣಿನ ಸವಕಳಿ ಆಗುವುದನ್ನೂ ತಪ್ಪಿಸುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ವಿದ್ಯುತ್ ಉತ್ಪಾದನೆಯನ್ನೂ ಮಾಡಬಹುದಾಗಿದ್ದು, ನೀರಾವರಿ ಉದ್ದೇಶಕ್ಕೂ ಬಳಸಿಕೊಳ್ಳಬಹುದು. ಶುದ್ಧ ಕುಡಿಯುವ ನೀರನ್ನೂ ಪೂರೈಕೆ ಮಾಡಬಹುದು. ಈ ವಿಚಾರದಲ್ಲಿ ಸಾಕಷ್ಟು ಅಧ್ಯಯನ ನಡೆಸಿದ್ದು, ಸಾಧಕ-ಬಾಧಕಗಳ ಕುರಿತು ಸಮಾಲೋಚಿಸಲಾಗಿದೆ. ಆದರೂ ಅಂತಿಮವಾಗಿ ಇದರ ಸಾಧ್ಯತಾಸಾಧ್ಯತೆ ಕುರಿತು ಸರ್ಕಾರ ನಿರ್ಣಯಿಸಬೇಕು ಎಂದು ಸಭೆಯಲ್ಲಿ ಸಚಿವರಿಗೆ ಸೀತಾರಾಂ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ವರದಿ ನೀಡಲು ಸರ್ಕಾರ ಹೇಳಿತ್ತು, ಸಲ್ಲಿಸಿದ್ದೇನೆ.
ಆದರೆ, ವರದಿಯ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಸೀತಾರಾಂ, ವರದಿ ನೀಡಲು ಸರ್ಕಾರ ಹೇಳಿತ್ತು. ಅದನ್ನು ಸಲ್ಲಿಸಿದ್ದೇನೆ. ಇನ್ನೇನಿದ್ದರೂ ಸರ್ಕಾರವೇ ಮುಂದಿನ ತೀರ್ಮಾನ ಕೈಗೊಳ್ಳಬೇಕು. ಸರ್ಕಾರವೇ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದಷ್ಟೇ ಹೇಳಿದ್ದಾರೆ.
ಸಭೆಯಲ್ಲಿ ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್, ಪರಿಸರ ಇಲಾಖೆ ಕಾರ್ಯದರ್ಶಿ ರವಿಕುಮಾರ್, ಅಂಜುಂ ಪರ್ವೇಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY