ದೇವಸ್ಥಾನದ ಸ್ವಾಗತ ಕಮಾನಿನಲ್ಲಿ ಹಸುವಿನ ಕೊಳೆತ ಕಾಲುಗಳು ಪತ್ತೆ

ಮಡಿಕೇರಿ: ನಾಪೋಕ್ಲು ಬಳಿಯ ಕಕ್ಕಬ್ಬೆಯ ನಟ್ಟುಮಾಡು ಶ್ರೀ ಭಗವತಿ ದೇವಸ್ಥಾನದ ಸ್ವಾಗತ ಕಮಾನಿನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ದನದ ನಾಲ್ಕು ಕಾಲುಗಳನ್ನು ಚೀಲವೊಂದರಲ್ಲಿ ನೇತು ಹಾಕಿದ ಪ್ರಕರಣ ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ಹಾಗೂ ಹಿಂದು ಪರ ಸಂಘಟನೆಗಳ ಪ್ರಮುಖರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ದನದ ನಾಲ್ಕು ಕಾಲುಗಳು
ನಟ್ಟುಮಾಡು ಶ್ರೀಭಗವತಿ ದೇವಸ್ಥಾನದ ಸ್ವಾಗತ ಕಮಾನಿನಲ್ಲಿ ಪ್ಲಾಸ್ಟಿಕ್ ಚೀಲ ಕಟ್ಟಿಕೊಂಡಿರುವುದನ್ನು ಬುಧವಾರ ಬೆಳಗ್ಗೆ ಗ್ರಾಮಸ್ಥರು ಗಮನಿಸಿ ಪರಿಶೀಲಿಸಿದಾಗ, ಅದರಲ್ಲಿ ದನದ ನಾಲ್ಕು ಕಾಲುಗಳು ಇರುವುದು ಕಂಡು ಬಂತು. ಈ ಬಗ್ಗೆ ನಾಪೋಕ್ಲು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಗ್ರಾಮಸ್ಥರು ದೇವಸ್ಥಾನದ ಬಳಿಯಲ್ಲೆ ಪ್ರತಿಭಟನೆ ನಡೆಸಿದರು. ದುಷ್ಕೃತ್ಯಕ್ಕೆ ಕಾರಣರಾದವರನ್ನು ಬಂಧಿಸುವಂತೆ ಒತ್ತಾಯಿಸಿದರು.
ಕಕ್ಕಬ್ಬೆ ಪೇಟೆಯ ಕೂಡು ರಸ್ತೆಯಲ್ಲಿ ಕೂಡಾ ಪ್ರತಿಭಟನಾ ಸಭೆ ನಡೆಸಿ ಘಟನೆಯನ್ನು ತೀವ್ರವಾಗಿ ಖಂಡಿಸಲಾಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ.ಹರೀಶ್, ಜಿಲ್ಲಾ ಪಂಚಾಯ್ತಿ ಸದಸ್ಯ ಪಾಡಿಯಮಂಡ ಮುರುಳಿ, ನೆಲ್ಲಚಂಡ ಕಿರಣ್ ಕಾರ್ಯಪ್ಪ, ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಕಕ್ಕಬ್ಬೆ ಕುಂಜಿಲ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ಬಡಕಡ ಸುರೇಶ್, ರವಿ ಬಸಪ್ಪ ಮತ್ತಿತರರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಡಿಕೇರಿ ಡಿವೈಎಸ್ಪಿ ಸುಂದರಾಜ್ ಅವರು ಅಹವಾಲು ಆಲಿಸಿ ಹಬ್ಬದ ಸಂದರ್ಭ ಇಂತಹ ಕೃತ್ಯ ಎಸಗಿರುವ ಕಿಡಿಗೇಡಿಗಳು ಯಾರೇ ಆಗಿದ್ದರೂ ಬಂಧಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಪ್ರಮುಖರಾದ ಪಾಂಡಂಡ ನರೇಶ್, ಕಲಿಯಂಡ ಸುನಂದ, ಚಂಡಿರ ಜಗದೀಶ್, ಸುರಾ ನಾಣಯ್ಯ, ಕುಶಾಲಪ್ಪ, ಸ್ವಿಟಾ ಪೆಮ್ಮಯ್ಯ, ಜಾಲಿ ಪೂವಪ್ಪ, ನಾಣಯ್ಯ, ಎಂ.ರಮೇಶ್, ಪ್ರಮೀಳಾ ಪೆಮ್ಮಯ್ಯ, ವಿಜು ಪೂಣಚ್ಚ, ಶರಣ್ ಕುಮಾರ್ ಸೇರಿದಂತೆ ಹಲವಾರು ಹಿಂದು ಮುಖಂಡರು ಹಾಜರಿದ್ದರು.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ನಾಪೆಕ್ಲು ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ನಟ್ಟುಮಾಡು ಕಕ್ಕಬ್ಬೆ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮಡಿಕೇರಿಯಲ್ಲಿ ಪ್ರತಿಭಟನೆ
ವಿವಿಧ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾ ಕೇಂದ್ರ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸಂಜೆ ರಸ್ತೆ ತಡೆ ಪ್ರತಿಭಟನೆ ನಡೆಸಿ ಘಟನೆಯನ್ನು ಖಂಡಿಸಿದರು. ರಸ್ತೆ ತಡೆಯ ಬಳಿಕ ಮೆರವಣಿಗೆಯಲ್ಲಿ ಜಿಲ್ಲಾಡಳಿತ ಭವನಕ್ಕೆ ತೆರಳಿದ ಪ್ರತಿಭಟನಾಕಾರರು ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಆದಷ್ಟು ಶೀಘ್ರ ದುಷ್ಕೃತ್ಯವೆಸಗಿರುವ ಆರೋಪಿಗಳನ್ನು ಬಂಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಜರಂಗದಳದ ಸಂಚಾಲಕ ಅಜಿತ್ ಕುಮಾರ್, ವಿಹಿಂಪದ ಪ್ರಮುಖ ಡಿ.ಹೆಚ್.ಮೇದಪ್ಪ, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ಅರುಣ್, ಪ್ರಮುಖರಾದ ಮನು ಮಂಜುನಾಥ್, ಗಣೇಶ್ ಕಡಗದಾಳು ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY