ಸ್ವಯಂ ಘೋಷಿತ ದೇವಮಾನವ ರಾಮ್ ರಹೀಂ ಸಿಂಗ್‌ಗೆ ಕೇರಳದಲ್ಲೂ 42 ಎಕ್ರೆ ಜಮೀನು!

ತಿರುವನಂತಪುರದಲ್ಲಿ ಈ ಹಿಂದೆ ನಡೆದಿದ್ದ ಕಾರ್ಯಕ್ರಮದಲ್ಲಿ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಂ ಸಿಂಗ್ ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರೊಂದಿಗೆ ವೇದಿಕೆ ಹಂಚಿಕೊಂಡಿದ್ದ.

ಕೊಚ್ಚಿ: ವಿವಾದಾತ್ಮಕ ಸ್ವಯಂ ಘೋಷಿತ ದೇವಮಾನವ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಂ ಸಿಂಗ್ ಕೇರಳದಲ್ಲೂ ಜಮೀನು ಹೊಂದಿರುವ ವಿಷಯವು ತಡವಾಗಿ ವರದಿಯಾಗಿದೆ.
ಕೇರಳದ ವಯನಾಡು ಜಿಲ್ಲೆಯ ವೈತ್ತಿರಿ ತಾಲೂಕಿನಲ್ಲಿ ಕುನತಿಡವಗ ವಿಲ್ಲೇಜ್ ವ್ಯಾಪ್ತಿಯಲ್ಲಿ 42 ಎಕ್ರೆ ಜಾಗವನ್ನು ಆಶ್ರಮ ಕಟ್ಟಲು ಖರೀದಿಸಿರುವ ವಿಚಾರವು ತಿಳಿದು ಬಂದಿದೆ. ಆದರೆ ಕೇರಳ ಅರಣ್ಯ ಇಲಾಖೆಯು ಆಶ್ರಮ ನಿರ್ಮಾಣದ ಕಾಮಗಾರಿಗೆ ಅಡ್ಡಗಾಲಿಟ್ಟ ಪರಿಣಾಮ ಕಾಮಗಾರಿಗಳು ನೆನೆಗುದಿಗೆ ಬೀಳುವಂತಾಗಿತ್ತು.
ಈ ವಿವಾತ ದೇವಮಾನವ ವಾಗಾಮಣ್ಣಿಗೆ ಹಲವು ಬಾರಿ ಭೇಟಿ ನೀಡಿದ್ದಾನೆ. ಇಡುಕ್ಕಿಯ ಗಾಂಜಾ ಮಾಫಿಯಾಗಳೊಂದಿಗೆ ಈತ ಹತ್ತಿರದ ಸಂಪರ್ಕವನ್ನು ಇಟ್ಟುಕೊಂಡಿದ್ದನು. ಈತ ತನ್ನ ಸಂಗೀತ ಕಾರ್ಯಕ್ರಮಗಳಲ್ಲಿ ಯಥೇಚ್ಛವಾಗಿ ಗಾಂಜಾವನ್ನು ವಿತರಿಸಿರುವುದಾಗಿ ಕೇಂದ್ರ ನಾರ್ಕೋಟಿಕ್ ಬ್ಯೂರೋ ನಡೆಸಿದ ತನಿಖೆಯಿಂದ ವ್ಯಕ್ತಗೊಂಡಿದೆ.
2014ರಲ್ಲಿ ಈತ ವಾಗಾಮಣ್ಣ್‌ನಲ್ಲಿ ಹಲವು ದಿನಗಳ ಕಾಲ ತಂಗಿದ್ದನು. ವಯನಾಡಿನಲ್ಲಿಯೂ ಈತ ಹಲವು ದಿನಗಳ ಕಾಲ ರಿಸೋರ್ಟ್‌ನಲ್ಲಿ ತಂಗಿದ್ದನು. ಮಾತ್ರವಲ್ಲದೆ ಕೇರಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಿರುವನಂತಪುರದಲ್ಲಿ ನಡೆದ ಈಜುಕೊಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಈತ ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿಯೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದನು.
ಕೇರಳಕ್ಕೆ ಭೇಟಿ ನೀಡಿ ಉಮ್ಮನ್ ಚಾಂಡಿಯೊಂದಿಗೆ ವೇದಿಕೆ ಹಂಚಿಕೊಂಡ ಗುರ್ಮಿತ್‌ನ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವಿವಾದಕ್ಕೆ ಗ್ರಾಸವಾಗಿದೆ. ಮಾನಭಂಗ ಕೇಸು ಮತ್ತು ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಈತನೊಂದಿಗೆ ಅಂದು ಉಮ್ಮನ್ ಚಾಂಡಿ ವೇದಿಕೆ ಹಂಚಿಕೊಂಡಿದ್ದರು. ಇವರು ಕೇರಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇವರ ಭದ್ರತಾ ವೆಚ್ಚವನ್ನು ಕೇರಳ ಸರಕಾರ ಭರಿಸಬೇಕು ಎಂದು ಹರಿಯಾಣದ ಕಾಂಗ್ರೆಸ್ ಸರಕಾರವು ಆಗ್ರಹಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ಈತನಿಗೆ 280 ಕೋಟಿ ರೂ.ಮೌಲ್ಯದ ಆಸ್ತಿಯು ಕೇರಳದಲ್ಲಿರುವುದಾಗಿ ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ. ವಯನಾಡು, ಮುನ್ನಾರ್, ವಾಗಾಮಣ್ಣ, ಕುಮಾರಗಂ, ಕೊಚ್ಚಿ ಮತ್ತು ತಿರುವನಂತಪುರದಲ್ಲಿ ಈತ ಆಸ್ತಿಯನ್ನು ಬೇನಾಮಿ ಹೆಸರಲ್ಲಿ ಹೊಂದಿರುವುದಾಗಿ ಗುಪ್ತಚರ ಇಲಾಖೆಯು ಬೊಟ್ಟು ಮಾಡುತ್ತಿದೆ. ಈ ಕುರಿತು ರಹಸ್ಯವಾಗಿ ತನಿಖೆಯನ್ನು ಕೈಗೆತ್ತಿಕೊಂಡಿರುವುದಾಗಿ ತಿಳಿದು ಬಂದಿದೆ.

LEAVE A REPLY