ಸುರಿವ ಮಳೆಯಲ್ಲೂ ಖುದ್ದು ನಿಂತು ಹೆದ್ದಾರಿ ದುರಸ್ತಿ ಕೆಲಸ ಮಾಡಿಸಿದ ಸಂಸದ ನಳಿನ್

ಮಂಗಳೂರು: ರಾಷ್ಟ್ರೀಯ ಹೆದ್ದಾರಿಯ ಪಡೀಲ್ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ ಮತ್ತು ರಾಷ್ಟ್ರೀಯ ಹೆದ್ದಾರಿ ದುರಸ್ತಿಗೊಳಿಸದೇ ಸಂಚಾರ ದಟ್ಟಣೆಗೆ ಕಾರಣರಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳನ್ನು ಸಂಸದ ನಳಿನ್ ಕುಮಾರ್ ಕಟೀಲು ಮಂಗಳವಾರ ತೀವ್ರ ತರಾಟೆಗೆತ್ತಿಕೊಂಡರು.
ಬೆಳಗ್ಗೆ ಪಡೀಲ್ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪರಿಶೀಲನೆಗೆ ತೆರಳಿದ ಸಂಸದರು ಮಧ್ಯಾಹ್ನವರೆಗೂ ಮಳೆಯ ನಡುವೆಯೇ ಸ್ಥಳದಲ್ಲಿ ನಿಂತು ಮೇಲ್ಸೆತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ, ವಾಹನ ಸಂಚಾರಕ್ಕೆ ಮುಕ್ತಗೊಳಿಸುವಂತೆ ಖಡಕ್ ಸೂಚನೆ ನೀಡಿದರು. ಮಳೆಗಾಲದಲ್ಲಿ ಹೊಂಡ ಬಿದ್ದು ವಾಹನಗಳು ಸಂಚರಿಸಲಾಗದೇ ಸ್ಥಳದಲ್ಲಿ ಟ್ರಾಫಿಕ್ ಜಾಂ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಖುದ್ದು ನಿಂತು ಹೆದ್ದಾರಿ ದುರಸ್ತಿ ಕೆಲಸ ಮಾಡಿಸಿದರು.
ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಒಂದು ಹಂತದಲ್ಲಿ ಮೇಲ್ಸೇತುವೆಯಲ್ಲಿ ಬಾಕಿಯಿರುವ ಕಾಂಕ್ರೀಟ್ ಕಾಮಗಾರಿಗಾಗಿ ಹಾಕಿರುವ ಬೀಮ್‌ಗಳನ್ನು ತೆರವುಗೊಳಿಸಿ, ಬುಧವಾರದಿಂದಲೇ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕು, ಇಲ್ಲವಾದಲ್ಲಿ ತಾವೇ ಸಾರ್ವಜನಿಕರ ಸಹಕಾರದಿಂದ ತೆರವುಗೊಳಿಸಿ ವ್ಯವಸ್ಥೆ ಮಾಡುತ್ತೇವೆ. ನೀವು ಟ್ರಾನ್ಸ್‌ಫರ್ ತೆಗೆದುಗೊಂಡು ಬೇರೆಡೆ ಹೋಗಿ ಎಂದು ಎನ್‌ಎಚ್ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು. ವಾರದ ಹಿಂದೆ ಉತ್ತಮ ಬಿಸಿಲಿದ್ದರೂ, ಯಾವುದೇ ಕಾಮಗಾರಿ ನಡೆಸದ ಗುತ್ತಿಗೆದಾರ ಸಂಸ್ಥೆಯ ಪ್ರತಿನಿಧಿಗಳನ್ನೂ ಸಂಸದರು ತರಾಟೆಗೆ ತೆಗೆದುಕೊಂಡರು.
ಬಾಕ್ಸ್‌ಪುಶ್ಶಿಂಗ್‌ನಲ್ಲಿ ನಡೆಸಿರುವ ಕಾಮಗಾರಿಯೂ ಸರಿಯಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ ಸಂಸದರು, ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಯವರಿಗೆ ಬಾಕ್ಸ್‌ಪುಶ್ಶಿಂಗ್  ತಂತ್ರಜ್ಞಾನದ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ರೈಲ್ವೆಯವರಿಗೆ ವಹಿಸಿದ್ದರೆ ಈಗಾಗಲೇ ಉತ್ತಮ ಸೇತುವೆ ನಿರ್ಮಾಣವಾಗುತ್ತಿತ್ತು ಎಂದರು.
ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಸ್ಥಳೀಯರಿಂದಲೂ ಆಕ್ರೋಶ ವ್ಯಕ್ತವಾಯಿತು. ಹೆದ್ದಾರಿ ಪ್ರಾಧಿಕಾರದವರು ಮಳೆಗಾಲಕ್ಕೆ ಮುನ್ನ ಹೆದ್ದಾರಿಗೆ ಸರಿಯಾಗಿ ಡಾಂಬರು ಹಾಕದಿರುವುದರಿಂದ  ಮಳೆಗಾಲ ಆರಂಭದಿಂದಲೇ ಹೊಂಡ ನಿರ್ಮಾಣವಾಗುವ ಪ್ರತಿನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆಯಾಗುತ್ತಿದೆ. ಹೊಸ ಮೇಲ್ಸೇತುವೆ ಸಂಚಾರ ಮುಕ್ತಗೊಳಿಸಿದ್ದರೆ ಟ್ರಾಫಿಕ್ ಜಾಮ್ ಕಿರಿಕಿರಿ ತಪ್ಪುತ್ತಿತ್ತು. ಹೆದ್ದಾರಿ ಹೊಂಡಕ್ಕೆ ಸಿಮೆಂಟ್-ಜಲ್ಲಿ ಮಿಶ್ರಣ ತಂದು ಸುರಿಯುತ್ತಿದ್ದು, ಇದರಿಂದ ರಸ್ತೆ ಮತ್ತಷ್ಟು ಹಾಳಾಗಿದೆ ಎಂದು ಸಾರ್ವಜನಿಕರು ಸಂಸದರ ಬಳಿ ದೂರಿದರು.
ಕಾರ್ಪೋರೇಟರ್ ಸುಧೀರ್ ಶೆಟ್ಟಿ ಕಣ್ಣೂರು, ಸ್ಥಳೀಯರಾದ ಮೋಹನ್‌ಪಡೀಲ್, ಸಂತೋಷ್, ದೇವದಾಸ್, ತೇಜಸ್ ಉಪಸ್ಥಿತರಿದ್ದರು.
ತಾಕೀತು
ರಾಷ್ಟ್ರೀಯ ಹೆದ್ದಾರಿ ಇಲಾಖೆ ರಸ್ತೆ ಗುಂಡಿ ಮುಚ್ಚುವ  ಕಾಮಗಾರಿ ಸಮರ್ಪಕವಾಗಿ ನಡೆಸದಿರುವ ಕಾರಣ ಸಂಸದ ನಳಿನ್ ಕುಮಾರ್ ಕಟೀಲು ಖುದ್ದಾಗಿ ಸುರಿಯುತ್ತಿರುವ ಮಳೆಯ ನಡುವೆಯೇ ಕಾಮಗಾರಿ ನಡೆಸುವಂತೆ ಮಾಡಿದರು. ಗುಂಡಿಗಳನ್ನು ಮುಚ್ಚಿಸಿ, ರಸ್ತೆ ಸಮತಟ್ಟುಗೊಳಿಸಿ, ವಾಹನ ಸಂಚಾರ ಸುಗಮವಾಗುವಂತೆ ಕ್ರಮ ಕೈಗೊಂಡರು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಸ್ಥಳದಲ್ಲಿದ್ದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಸಂಚಾರಕ್ಕೆ ಯಾವುದೇ ತೊಡಕಾಗದಂತೆ ನೋಡಿಕೊಳ್ಳಲು ತಾಕೀತು ಮಾಡಿದರು.

LEAVE A REPLY