ಕೆಲಸ ಮಾಲಿಯೂ ಓಕೆ, ಕೂಲಿಯೂ ಓಕೆ ಎಂದು ಅರ್ಜಿ ಗುಜರಾಯಿಸಿದ ‘ದೇವಮಾನವ’!

ರೋಹ್ಟಕ್: ಅತ್ಯಾಚಾರ ಆರೋಪ ದೃಢಪಟ್ಟು ಜೈಲು ಸೇರಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ದಿನಚರಿ ಹೇಗಿದೆ ಗೊತ್ತಾ?
ಒಂದು ಕಾಲದಲ್ಲಿ ರಾಜವೈಭೋಗದಲ್ಲಿ ತೇಲಾಡುತ್ತಿದ್ದ, ಬಗೆ ಬಗೆಯ ಭಕ್ಷ್ಯ ಭೋಜನ ಸೇವಿಸುತ್ತಾ, ಪಲ್ಲಂಗದಲ್ಲಿ ಪವಡಿಸುತ್ತಿದ್ದ ’ದೇವಮಾನವ’ ಇಂದು ತೋಟದ ಮಾಲಿ ಅಥವಾ ಜೈಲಿನ ಪುಟ್ಟ ಕಾರ್ಖಾನೆಯಲ್ಲಿ ಕೂಲಿ ಕೆಲಸ ಮಾಡುವುದಾಗಿ ಇಚ್ಛಿಸಿ ಅರ್ಜಿ ಭರ್ತಿ ಮಾಡಿದ್ದಾನೆ! ಈ ನೌಕರಿ ಸಿಕ್ಕಿದರೆ ರಾಜಕಾರಣಿಗಳು, ಉದ್ಯಮಪತಿಗಳಿಂದ ಲಕ್ಷಗಟ್ಟಲೆ ಹಣವನ್ನು ಗೌರವ ದೇಣಿಗೆ ರೂಪದಲ್ಲಿ ಪಡೆಯುವ ಈತನಿಗೆ ದಿನಕ್ಕೆ 40 ರೂ.ಗಳ ಕೂಲಿ ನಿಗದಿಗೊಳ್ಳಲಿದೆ.
ಜೈಲೂಟದಲ್ಲಿ ನೀಡಿದ್ದ ನಾಲ್ಕು ರೊಟ್ಟಿಯಲ್ಲಿ ಕಳೆದ ರಾತ್ರಿ ಆತ ತಿಂದಿದ್ದು ಬರೀ ಅರ್ಧ ರೊಟ್ಟಿ ಮಾತ್ರ! ಬಹು ಹೊತ್ತು ಚಿಂತಾಕ್ರಾಂತನಾಗಿ ಕುಳಿತಿದ್ದ ’ಬಾಬಾ’ ಸರಿಯಾಗಿ ನಿದ್ದೆ ಮಾಡಿರಲಿಲ್ಲ ಎನ್ನುತ್ತದೆ ಜೈಲು ಮೂಲಗಳು. ಬಣ್ಣ ಬಣ್ಣದ, ಬಲು ದುಬಾರಿಯ ಬಟ್ಟೆ ಧರಿಸುತ್ತಾ ಓಡಾಡಿಕೊಂಡಿದ್ದ ಬಾಬಾಗೆ ಈಗ ಧರಿಸಲು ಸಿಗುತ್ತಿರುವುದು ಖಾದಿ ವಸ್ತ್ರ!
ಎಲ್ಲರ ಕಾಲೆಳೆಯುತ್ತೆ ಕಾಲ… ಸುಮ್ಮನೇ ಹೇಳಿದ ಮಾತಲ್ಲ ಆಲ್ವಾ?

LEAVE A REPLY