ಎಂಎಂ ಕಲಬುರ್ಗಿ ಹತ್ಯೆ: ಕ್ಷಿಪ್ರ ಗತಿಯ ತನಿಖೆಗೆ ಸಿಎಂ ಸೂಚನೆ

ಬೆಂಗಳೂರು: ವಿದ್ವಾಂಸ ಡಾ ಎಂ. ಎಂ. ಕಲಬುರ್ಗಿ ಕೊಲೆ ಪ್ರಕರಣ ತನಿಖೆಯನ್ನು ಕ್ಷಿಪ್ರ ಗತಿಯಲ್ಲಿ ನಡೆಸುವಂತೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕಗ್ಗೊಲೆಗೆ ತೀವ್ರವಾಗಿ ಪ್ರತಿಕ್ರಿಯಿಸಿ ಹಲವು ಬರಹಗಾರರರು ತಮಗೆ ಸಂದಿದ್ದ ಪ್ರಶಸ್ತಿಗಳನ್ನು ಹಿಂದಿರುಗಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ನಾಗರೀಕ ಸಂಘ-ಸಂಸ್ಥೆಗಳು ಕಳವಳವನ್ನು ವ್ಯಕ್ತ ಪಡಿಸಿದ್ದರು. ಕರ್ನಾಟಕ ಸರ್ಕಾರವು ಹಂತಕರನ್ನು ಪತ್ತೆ ಹಚ್ಚಲು ಕೂಡಲೇ ಕ್ರಮಗಳನ್ನು ಕೈಗೊಂಡು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ದರ್ಜೆಯ ಇಬ್ಬರು, ೨೭ ಇತರೆ ಅಧಿಕಾರಿಗಳು ಹಾಗೂ ೩೦ ತಾಂತ್ರಿಕ ವಿಶ್ಲೇಷಕರ ಸಮರ್ಥ ತಂಡವನ್ನು ರಚಿಸಿ, ತನಿಖೆಯನ್ನು ಚುರುಕುಗೊಳಿಸಲು ಪ್ರಕರಣವನ್ನು ಸಿಐಡಿಗೆ ವಹಿಸಿದೆ. ತನಿಖಾ ತಂಡವು ಕಲೆ ಹಾಕಿದ ಎಲ್ಲಾ ಮಾಹಿತಿಯನ್ನು ವಿಶ್ಲೇಷಿಸಿ ಮಹಾರಾಷ್ಟ್ರದಲ್ಲಿ ಇದೇ ಮಾದರಿಯಲ್ಲಿ ನಡೆದಿರುವ ಡಾ ನರೇಂದ್ರ ದಾಬೋಲ್ಕರ್ ಮತ್ತು ಕಾಮ್ರೆಡ್ ಗೋವಿಂದ ಪನ್ಸಾರೆ ಅವರ ಹತ್ಯೆ ಪ್ರಕರಣಗಳನ್ನು ತನಿಖೆ ನಡೆಸುತ್ತಿರುವ ತಂಡಗಳೊಂದಿಗೆ ರಾಜ್ಯದ ತನಿಖಾ ತಂಡವು ನಿರಂತರ ಸಂಪರ್ಕದಲ್ಲಿದೆ. ಈ ಎರಡೂ ತಂಡಗಳು ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ನಡೆದ ಅಪರಾಧ ಪ್ರಕರಣಗಳಲ್ಲಿ ಸಾಮ್ಯತೆಗಳಿವೆ ಎಂಬುದನ್ನು ಗಮನಿಸಿವೆ.
ಐತಿಹಾಸಿಕ ವಿಚಾರಗಳಿಗೆ ಸಂಬಂಧಿಸಿದಂತೆ ವಿಭಿನ್ನ ದೃಷ್ಟಿಕೋನವನ್ನು ಹೊಂದಿರುವ ಬುದ್ದಿ ಜೀವಿಗಳ ಮೇಲೆ ದಾಳಿ ಈ ಅಪರಾಧದ ಹಿಂದಿನ ಉದ್ದೇಶ ಎಂಬುದು ಸಾಬೀತಾಗಿದೆ. ಆಗಸ್ಟ್ ೩೦ ರಂದು ಡಾ ಎಂ ಎಂ ಕಲಬುರ್ಗಿ ಅವರ ಕಗ್ಗೊಲೆಯ ಎರಡನೇ ವರ್ಷದ ಕಹಿ ನೆನಪಿನ ಸಂದರ್ಭದಲ್ಲಿ ವಿಶೇಷವಾಗಿ ಸಭೆಗಳನ್ನು ಆಯೋಜಿಸುವವರಿಗೆ ಅಪರಾಧಿಗಳನ್ನು ಹಿಡಿಯುವಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಲು ಇಚ್ಛಿಸುತ್ತೇನೆ.
ಈ ನಿಟ್ಟಿನಲ್ಲಿ ಮಹಾರಾಷ್ಟ್ರ ತನಿಖಾ ತಂಡದ ಜೊತೆಗೆ ಕರ್ನಾಟಕ ತನಿಖಾ ತಂಡವು ಮತ್ತಷ್ಟು ಸಹಕಾರವನ್ನು ಹೆಚ್ಚಿಸಿಕೊಳ್ಳುವಂತೆ ಹಾಗೂ ಎಲ್ಲಾ ಮಾಹಿತಿಗಳನ್ನು ಸಮೀಪದ ದೃಷ್ಠಿಕೋನದಿಂದ ಪರಿಶೀಲಿಸಬೇಕೆಂದು ಸೂಚಿಸಿದ್ದೇನೆ. ನಮ್ಮ ತನಿಖಾ ತಂಡವು ಈ ಅಪರಾಧವನ್ನು ಬಗೆ ಹರಿಸುವಲ್ಲಿ ಅಂತಿಮ ಘಟ್ಟ ತಲುಪಿದೆ ಹಾಗೂ ಶೀಘ್ರದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

LEAVE A REPLY