ಬಸ್ ನಿರ್ವಾಹಕ ರಸ್ತೆಯಲ್ಲಿ… ವಿದ್ಯಾರ್ಥಿಗಳು ಬಸ್ಸಲ್ಲಿ!

ಆಲಂಕಾರು:ಕಳೆದ ಅನೇಕ ಸಮಯಗಳಿಂದ ಬಸ್ಸಿಲ್ಲ ಬಸ್ಸಿಲ್ಲ ಅಂತ ವಿದ್ಯಾರ್ಥಿಗಳು ಬೊಬ್ಬಿಡುತ್ತಾರೆ, ಹಾಗಿದ್ದರೂ ಈ ಮಾತನ್ನು ಕೇಳೋರಿಲ್ಲ ಅಂದರೆ ಇದು ಯಾವ ಪರಿಯ ಅವಸ್ಥೆ. …? ಹಾಗಂತ ಪ್ರಶ್ನೆ ಮಾಡುತ್ತಿದ್ದಾರೆ ವಿದ್ಯಾರ್ಥಿಗಳು. ಕಾರಣ ಏನು ಗೊತ್ತಾ ? ಈ ಸ್ಟೋರಿ ಓದಿ…
ಕಡಬ-ಉಪ್ಪಿನಂಗಡಿ ರಸ್ತೆ ಮಧ್ಯೆ ಪ್ರತಿದಿನ ಬೆಳಗ್ಗೆ ಶಾಲಾ ದಿನಗಳಲ್ಲಿ ಓಡಾಡುವ ಬಸ್ಸುಗಳು ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿರುತ್ತವೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬಾಗಿಲಲ್ಲಿಯೇ ನೇತಾಡಿಕೊಂಡು ಶಾಲೆಗೆ ಪ್ರಯಾಣಿಸುವ ಪ್ರಸಂಗ ಎದುರಾಗಿದೆ. ಶನಿವಾರ ಆಲಂಕಾರು ಪೇಟೆಯಲ್ಲಿ ಬಸ್ ನಿರ್ವಾಹಕ ವಿದ್ಯಾರ್ಥಿಗಳ ಮಧ್ಯೆ ಬಸ್ ಹತ್ತಲಾಗದೆ ರಸ್ತೆಯಲ್ಲೇ ನಿಂತುಬಿಟ್ಟರು. ಬಳಿಕ ಕೆಲ ವಿದ್ಯಾರ್ಥಿಗಳನ್ನು ಚಾಲಕ ಬಂದು ಬಸ್‌ನಿಂದ ಇಳಿಸಿದ ನಂತರ ಬಸ್ ಪ್ರಯಾಣ ಮುಂದುವರಿಸಿತು. ಇದು ಒಂದು ದಿನದ ಕತೆಯಲ್ಲ ಪ್ರತೀ ದಿನವೂ ವಿದ್ಯಾರ್ಥಿಗಳಿಗೆ ಇದೇ ಕತೆ-ವ್ಯಥೆ.
ಕಡಬ ಉಪ್ಪಿನಂಗಡಿ ರಸ್ತೆಯಲ್ಲಿ ಬೆಳಗ್ಗೆ ಶಾಲಾ ಸಮಯದಲ್ಲಿ ಬಸ್ಸುಗಳ ಸಂಖ್ಯೆ ಕಡಿಮೆ ಇದೆ. ಈ ಸಮಯದಲ್ಲಿ ಅಗತ್ಯವಾಗಿ ಶಾಲಾ ಮಕ್ಕಳ ಅನುಕೂಲಕ್ಕೆ ಬಸ್ಸು ಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಸಂಪರ್ಕ ವ್ಯವಸ್ಥೆ ಸರಿ ಇಲ್ಲ, ಖಾಸಗಿ ವಾಹನಗಳನ್ನು ನಂಬುವ ಹಾಗಿಲ್ಲ. ಒಂದು ವೇಳೆ ಸಮಯ ಮೀರಿದರೆ ಶಾಲೆಗೂ ವಿಳಂಬವಾಗುತ್ತದೆ.ಹೀಗಾಗಿ ಇರುವ ಬಸ್ಸಿನಲ್ಲೇ ವಿದ್ಯಾರ್ಥಿಗಳು ನೇತಾಡಿಕೊಂಡು ಹೋಗಬೇಕಾದ ಸ್ಥಿತಿ ಇದೆ. ಈ ಸಂದರ್ಭ ನಿರ್ವಾಹಕ ಕೂಡಾ ಬಸ್ಸಿನೊಳಗೆ ಹೋಗಲು ಕಷ್ಟವಾಗುವ ಸಂದರ್ಭ ಎದುರಾಗುತ್ತೆ. ಹೀಗಾಗಿ ತಕ್ಷಣವೇ ಶಾಲಾ ವಿದ್ಯಾರ್ಥಿಗಳ ಸಮಯಕ್ಕೆ ಹೆಚ್ಚುವರಿಯಾಗಿ ಉಪ್ಪಿನಂಗಡಿ ಕಡಬ ರಸ್ತೆ ಮಾರ್ಗವಾಗಿ ಬಸ್ಸು ವ್ಯವಸ್ಥೆಯಾಗಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

LEAVE A REPLY