ಪುತ್ತೂರು ನಗರದ ಹೃದಯಭಾಗದಲ್ಲಿ ಚರ್ಚೆ ಮರ ಬೇಕೋ? ಗಾಂಧಿಕಟ್ಟೆ ಬೇಕೋ? ಅಭಿವೃದ್ಧಿ ಬೇಕೋ?

ಪುತ್ತೂರು: ನಗರದ ಹೃದಯಭಾಗವಾದ ಬಸ್ ನಿಲ್ದಾಣದ ಬಳಿಯಲ್ಲಿ ಈಗ ಚರ್ಚೆ ಶುರುವಾಗಿದೆ. ಇಲ್ಲಿರುವ ಅಶ್ವತ್ಥ ವೃಕ್ಷ ಬೇಕೋ..? ಗಾಂಧಿಕಟ್ಟೆ ಬೇಕೋ? ನಗರದ ಅಭಿವೃದ್ಧಿ ಬೇಕೋ?. ಈ ಎಲ್ಲಾ ಗೊಂದಲದ ನಡುವೆ ಇಲಾಖೆಗಳು ಮೌನವಾಗಿವೆ, ಜನಪ್ರತಿನಿಧಿಗಳು ತುಟಿಬಿಚ್ಚುತ್ತಿಲ್ಲ!. ಹಾಗಿದ್ದರೆ ಆಗಬೇಕಾದ್ದು ಏನು?
ಪುತ್ತೂರು ನಗರದ ಹೃದಯಭಾಗದಲ್ಲಿರುವ ಗಾಂಧಿಕಟ್ಟೆ ಮತ್ತು ಅಶ್ವತ್ಥ ಮರವನ್ನು ಕಾಪಾಡಿಕೊಳ್ಳಲಾಗುತ್ತಿಲ್ಲ. ಬಿದ್ದು ಹೋಗಲಿರುವ ಗಾಂಧಿಕಟ್ಟೆಯನ್ನು ದುರಸ್ತಿ ಮಾಡಲಾಗುತ್ತಿಲ್ಲ. ಮರದ ಬುಡವನ್ನು ಗಟ್ಟಿಗೊಳಿಸಲಾಗುತ್ತಿಲ್ಲ. ಯಾಕೆ ಆಗುತ್ತಿಲ್ಲ ಎಂಬುದಕ್ಕೆ ಕಾರಣ ಇಲ್ಲ. ಇತ್ತ ಕಡೆ ಅಶ್ವತ್ಥ ವೃಕ್ಷದ ಬುಡ ಶಿಥಿಲವಾಗುತ್ತಿದೆ, ಗಾಂಧಿಕಟ್ಟೆಯ ಸುತ್ತ ಬಿರುಕು ಬಿಟ್ಟಿದೆ. ಆದರೆ ದುರಸ್ತಿ ಮಾಡೋಣ ಎಂದರೆ ಯಾವ ಕಾರಣಕ್ಕೂ ಮರ ತೆಗೆಯಬೇಡಿರಿ ಇದು ಆಮ್ಲಜನಕ ನೀಡುವ ಮರ, ಪಕ್ಷಿಗಳು ಸ್ವಚ್ಚಂದವಾಗಿ ಓಡಾಡುವ ಮರ ಎಂದು ಪರಿಸರ ಪ್ರೇಮಿಗಳು ಹೇಳಿದರೆ, ಇತ್ತ ಕಡೆ ಗಾಂಧಿಕಟ್ಟೆ ತೆಗೆಯಬೇಡಿ ಇದು ಗಾಂಧೀಜಿ ಕುಳಿತ ಜಾಗ ಎಂದು ಗಾಂಧಿ ಪ್ರೇಮಿಗಳು ಹೇಳುತ್ತಾರೆ. ಇದಕ್ಕೆಲ್ಲಾ ಅಧಿಕಾರಿಗಳು ಉತ್ತರ ನೀಡಬೇಕಾಗಿದೆ. ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಬೇಕಿದೆ. ಆದರೆ ಯಾರೂ ಈ ಬಗ್ಗೆ ಮೌನ ಮುರಿಯುತ್ತಿಲ್ಲ! ಕಾರಣ ಇಷ್ಟೇ, “ರಾಜಕೀಯ”.
ಗಾಂಧೀಜಿ ಕುಳಿತು ಭಾಷಣ ಮಾಡಿದ ಜಾಗ ಇದು
1934 ನೇ ಇಸವಿಯಲ್ಲಿ ಗಾಂಧೀಜಿ ಪುತ್ತೂರಿಗೆ ಭೇಟಿ ನೀಡಿದ್ದರು. ಅವರು ಇದೇ ಜಾಗದಲ್ಲಿ ಕುಳಿತುಕೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಸ್ವಾತಂತ್ರ್ಯ ಭಾಷಣ ಮಾಡಿದ್ದರು. ಮುಂದಕ್ಕೆ ಗಾಂಧೀಜಿ ಕುಳಿತು ಭಾಷಣ ಮಾಡಿದ ಈ ಜಾಗದಲ್ಲಿ ಕಟ್ಟೆಯನ್ನು ಕಟ್ಟಿ ಇದಕ್ಕೆ ಗಾಂಧಿಕಟ್ಟೆ ಎಂದು ನಾಮಕರಣ ಮಾಡಲಾಯಿತು. ಅಂದು ಅಶ್ವತ್ಥ ಗಿಡವನ್ನು ಈ ಪ್ರದೇಶದಲ್ಲಿ ನೆಟ್ಟಿದ್ದರು. ಆ ನಂತರ ಮರ ಸತ್ತ ನಂತರ ಮತ್ತೆ ಅಶ್ವತ್ಥ ಮರ ನೆಡಲಾಯಿತು.
ಗಾಳಿ ನೀಡುವ, ಆಮ್ಲಜನಕ ನೀಡುವ ಮರ ಬೇಕು
ಆಮ್ಲಜನಕವನ್ನು ಅತ್ಯಧಿಕವಾಗಿ ಬಿಡುಗಡೆ ಮಾಡುವ ಮರಗಳಲ್ಲಿ ಅಶ್ವತ್ಥ ಮರ ಪ್ರಮುಖವಾಗಿದೆ. ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುವ ಅಶ್ವತ್ಥ ಮರ ಪೇಟೆಯ ಹೃದಯಭಾಗದಲ್ಲಿರುವುದು ಜನರ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ. ಒಂದು ಮರದಿಂದ ಅದೆಷ್ಟೋ ಸಾವಿರ, ಲಕ್ಷ ಕ್ಯಾಲೊರಿ ಆಮ್ಲಜನಕ ಪ್ರತಿನಿತ್ಯ ಬಿಡುಗಡೆಯಾಗುತ್ತಲೇ ಇರುತ್ತದೆ. ಇಂತಹ ಮರವನ್ನು ಕಡಿಯುವುದು ಕೂಡ ಪ್ರಕೃತಿಗೆ ಮಾಡುವ ಅನ್ಯಾಯವಾಗಿದೆ.ನಮ್ಮನ್ನು ನಾವೇ ಸಾಯಿಸಿದಂತೆ. ಮರ ಎಂದ ಕೂಡಲೆ ಹಕ್ಕಿಗಳು ಕೂಡ ಗೂಡು ಕಟ್ಟುತ್ತವೆ. ಇಲ್ಲೂ ಹಾಗೆ ಇದೆ. ದೂರದ ಊರಿನಿಂದ ಪ್ರತಿ ವರ್ಷ ವಲಸೆ ಬರುವ ವಿವಿಧ ಜಾತಿಗೆ ಕೊಕ್ಕರೆ, ಕಡಲು ಕಾಗೆ ಹೀಗೆ ಹಲವು ಪ್ರಕಾರದ ಹಕ್ಕಿಗಳು ಈ ಮರದಲ್ಲಿವೆ. ಮರವನ್ನು ಕಡಿದು ಹಾಕಿದರೆ ಈ ಮರವನ್ನೇ ಅವಲಂಬಿಸಿರುವ ಸಾವಿರಾರು ವಲಸೆ ಹಕ್ಕಿಗಳು ಅತಂತ್ರವಾಗುತ್ತವೆ. ಆದ್ದರಿಂದ ಮರವನ್ನು ಉಳಿಸುವ ಮೂಲಕ ಹಕ್ಕಿಗಳ ವಂಶಾಭಿವೃದ್ಧಿಯನ್ನು ಉತ್ತಮಗೊಳಿಸುವುದು ಒಳ್ಳೆಯದು ಎನ್ನುವುದು ಪಕ್ಷಿ ಪ್ರೇಮಿಗಳ ಆಶಯವಾಗಿದೆ.
ಅಪಾಯವಾಗುತ್ತದೆ, ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ
ಇದೆಲ್ಲಾ ಚರ್ಚೆ ಬಳಿಕ ಇನ್ನೊಂದು ಪ್ರಮುಖವಾಗಿ ಚರ್ಚೆಯಾಗುವ ಸಂಗತಿ ಈ ಮರ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಒಂದು ವೇಳೆ ಬಿದ್ದರೆ ಜೀವಹಾನಿ ಖಚಿತ. ಅದರ ಜೊತೆಗೆ ಪುತ್ತೂರು ಬೆಳೆಯುವ ಪ್ರದೇಶ. ಹೀಗಾಗಿ ಈ ಮರ ಹಾಗೂ ಕಟ್ಟೆ ಎರಡೂ ಸಮಸ್ಯೆಗೆ ಕಾರಣವಾಗುತ್ತಿದೆ. ರಸ್ತೆ ಅಗಲೀಕರಣವಾಗುತ್ತದೆ. ಬಸ್ಸು ನಿಲ್ದಾಣದ ಎದುರಿನಲ್ಲೇ ಈ ಮರ ಹಾಗೂ ಕಟ್ಟೆ ಇರುವುದರಿಂದ ನೂತನವಾಗಿ ನಿರ್ಮಾಣ ಮಾಡಿರುವ ಬಸ್ಸು ನಿಲ್ದಾಣಕ್ಕೂ ಅಡ್ಡವಾಗುತ್ತದೆ. ಹೀಗಾಗಿ ಮರ ಹಾಗೂ ಕಟ್ಟೆ ಎರಡೂ ತೆರವಾಗಬೇಕು. ಗಾಂಧಿಕಟ್ಟೆ ಪುತ್ತೂರಿನ ಐಡೆಂಟಿಟಿ ಹೌದು. ಆದರೆ ಗಾಂಧೀಜಿ ನೆನಪಲ್ಲಿ ಬಿರುಮಲೆ ಬೆಟ್ಟ ಅಭಿವೃದ್ಧಿ ಹಾಗೂ ಗಾಂಧಿಪ್ರತಿಮೆಯನ್ನು ಕಿಲ್ಲೆ ಮೈದಾನದ ಪಕ್ಕದಲ್ಲಿ ನಿರ್ಮಾಣ ಮಾಡಬಹುದು ಎಂಬುದು ಇನ್ನೊಂದು ವಾದ. ಇಲ್ಲಿ ಅದೆಷ್ಟೋ ವರ್ಷಗಳಿಂದ ಗಾಂಧಿ ಅವಮಾನವಾಗ್ತಾ ಇದೆ. ಗಾಂಧಿ ಕನ್ನಡಕ ಕಳ್ಳತನ, ಮದ್ಯದ ಬಾಟಲಿಗಳ ರಾಶಿ ಸೇರಿದಂತೆ ಆಗಾಗ ಇಂತಹ ಘಟನೆಗಳು ಇಲ್ಲಿ ನಡೆಯುತ್ತಿತ್ತು. ಒಂದು ಅಶ್ವತ್ಥ ಮರ ತೆರವು ಮಾಡಿದ ನಂತರ ನಗರದ, ದೇವಸ್ಥಾನದ ಆಸುಪಾಸಿನಲ್ಲಿ ೧೦ ಅಶ್ವತ್ಥ ಮರ ನೆಡುವ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂಬುದು ಬಲವಾದ ಒತ್ತಾಯ. ಆದ್ದರಿಂದ ಈ ಬಗ್ಗೆ ಅಧಿಕಾರಿಗಳು ಶೀಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ಮನವಿಯಾಗಿದೆ.
ಹಿಂದೊಮ್ಮೆ ಸಭೆಯೂ ಆಯ್ತು… ಪ್ರಾರ್ಥನೆಯೂ ಆಯ್ತು…
ಇಲ್ಲಿ ಗಾಂಧಿಕಟ್ಟೆ ತೆರವು ಮಾಡಬೇಕು, ಮರ ತೆರವು ಮಾಡಬೇಕು, ಮಹಾಲಿಂಗೇಶ್ವರ ದೇವರ ಕಟ್ಟೆ ತೆರವು ಮಾಡಬೇಕು ಎಂಬ ಕಾರಣದಿಂದ ಕಳೆದ ವರ್ಷ ಚರ್ಚೆಯಾಯಿತು. ಕೊನೆಗೆ ಈ ಬಗ್ಗೆ ಸಭೆಯೂ ನಡೆಯಿತು. ಆದರೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಇದಕ್ಕಾಗಿಯೇ ಸಮಿತಿ ರಚನೆ ಮಾಡಲಾಯಿತು. ಆದರೂ ಪರಿಹಾರ ಕಾರಣಲಿಲ್ಲ. ಇದೆಲ್ಲಾ ಆದ ಬಳಿಕ ಕಳೆದ ವರ್ಷ ಇಲ್ಲಿರುವ ಅಶ್ವತ್ಥ ವೃಕ್ಷದ ಬಳಿ ಇರುವ ಮಹಾಲಿಂಗೇಶ್ವರ ದೇವರ ಕಟ್ಟೆ ತೆರವು ಮಾಡಲು ಅರಣ್ಯ ಇಲಾಖಾ ಅಧಿಕಾರಿಗಳು ದೇವರ ಮುಂದೆ ಪ್ರಾರ್ಥನೆಯನ್ನೂ ಮಾಡಿದರು. ಅಶ್ವತ್ಥ ವೃಕ್ಷ ಹಾಗೂ ದೇವರ ಕಟ್ಟೆ ತೆರವು ಮಾಡಲು ಪ್ರಾರ್ಥನೆಯೂ ಆಗಿತ್ತು….!.
ಮತ್ತೆ ಜನಾಭಿಪ್ರಾಯಕ್ಕೆ ಮೊರೆ ಹೋದ ಅಧಿಕಾರಿಗಳು!
ಪುತ್ತೂರಿನ ಗಾಂಧಿಕಟ್ಟೆ ಮತ್ತು ಅಶ್ವತ್ಥ ಮರವನ್ನು ತೆರವುಗೊಳಿಸುವ ವಿಚಾರದಲ್ಲಿ ಬಹಳಷ್ಟು ಗೊಂದಲಗಳು ಏರ್ಪಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೂ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದೇ ಹೇಳಬೇಕಾಗಿದೆ. ಒಂದು ಕಡೆಯಲ್ಲಿ ಮರವೂ ಬೇಕು, ಗಾಂಧಿಕಟ್ಟೆಯೂ ಬೇಕು ಎಂಬ ಕೂಗು ಇದೆ. ಇನ್ನೊಂದು ಕಡೆಯಲ್ಲಿ ಮರ, ಕಟ್ಟೆಯಿಂದಾಗಿ ವ್ಯಾಪಾರಕ್ಕೆ, ಪುತ್ತೂರಿನ ಅಭಿವೃದ್ಧಿಗೆ ತೊಡಕಾಗುತ್ತಿದೆ ಎನ್ನುತ್ತಿರುವವರು. ಇದರಿಂದಾಗಿ ಅಧಿಕಾರಿಗಳು ಕೂಡ ಗೊಂದಲದಲ್ಲಿ ಸಿಕ್ಕಿಬಿದ್ದಿರುವಂತಿದೆ. ಅದಕ್ಕಾಗಿ ಈ ವಾರದಲ್ಲಿ ಪ್ರಮುಖರ ಸಭೆಯನ್ನು ಕರೆದು ಈ ಬಗ್ಗೆ ಚರ್ಚೆ ನಡೆಸಿ, ಜನಾಭಿಪ್ರಾಯ ಸಂಗ್ರಹಿಸುವ ಮೂಲಕ ಮರ ಮತ್ತು ಕಟ್ಟೆಯ ಉಳಿವು ಅಳಿವಿನ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಸಹಾಯಕ ಕಮೀಷನರ್ ತಿಳಿಸಿದ್ದು, ಮುಂದೇನಾಗುತ್ತದೆ ಎಂದು ಕಾದು ನೋಡಬೇಕಾಗಿದೆ.

LEAVE A REPLY