ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಲು ಆಗ್ರಹ

ಮಡಿಕೇರಿ: ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ರಾಜ್ಯ ಸರಕಾರ ಸಾಕ್ಷ್ಯಾಧಾರಗಳನ್ನು ನಾಶ ಮಾಡಿರುವುದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಿಂದ ಸಾಬೀತಾಗಿರುವುದರಿಂದ ಈ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿರುವ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ, ಅಲ್ಲಿವರೆಗೂ ಹೋರಾಟವನ್ನು ಮುಂದುವರಿಸುವುದಾಗಿ ಘೋಷಿಸಿದೆ.
ಸೋಮವಾರ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಎಂ.ಸಂಕೇತ್ ಪೂವಯ್ಯ ಅವರು, ಗಣಪತಿ ಆತ್ಮಹತ್ಯೆ ಪ್ರಕಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ರಾಜ್ಯ ಸರಕಾರ ನಾಶ ಮಾಡುವ ಸಾಧ್ಯತೆ ಇದೆ, ಮತ್ತು ‘ಸಿಒಡಿ ತನಿಖೆಯಿಂದ ಗಣಪತಿ ಅವರ ಕುಟುಂಬಕ್ಕೆ ನ್ಯಾಯ ಸಿಗುವುದಿಲ್ಲ ಎಂಬುದನ್ನು ಜಾತ್ಯತೀತ ಜನತಾದಳ ಗಣಪತಿ ಅವರ ಸಾವಿನ  ಮರುದಿನದಿಂದಲೂ ಪ್ರತಿಪಾದಿಸುತ್ತಾ ಬಂದಿದ್ದು, ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಅದನ್ನು ಸಾಬೀತುಪಡಿಸಿದೆ ಎಂದು ತಿಳಿಸಿದರು.
ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ಆರಂಭದಿಂದಲೂ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹಾಗೂ ಜಿಲ್ಲಾ ಮುಖಂಡ ಬಿ.ಎ.ಜೀವಿಜಯ ಅವರ ನೇತೃತ್ವದಲ್ಲಿ ಪಕ್ಷವು ಅವರ ಕುಟುಂಬ ನ್ಯಾಯಾಂಗ ಹೋರಾಟಕ್ಕೆ ಬೆಂಬಲ ನೀಡುತ್ತಾ ಬಂದಿದ್ದು, ಇನ್ನು ಮುಂದೆ ಕೂಡಾ ಪ್ರಕರಣ ತಾರ್ಕಿಕ ಅಂತ್ಯ ಕಾಣುತ ತನಕ ಹೋರಾಟ ಮುಂದುವರಿಸಲಿದೆ ಎಂದು ಅವರು ಘೋಷಿಸಿದರು.
ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರುವ ಮೊದಲೇ ಸಿಒಡಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಿಗೆ ಕ್ಲೀನ್‌ಚಿಟ್ ನೀಡಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿರುವುದರ ಹಿಂದೆ ಕೂಡಾ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವಾಲಯದ ಒತ್ತಡವಿದೆ ಎಂದು ಆರೋಪಿಸಿದ ಸಂಕೇತ್ ಪೂವಯ್ಯ ಅವರು, ಪ್ರಕರಣದಲ್ಲಿ ಜಿಲ್ಲಾ ಪೊಲೀಸರು ಕೂಡಾ ಒತ್ತಡಕ್ಕೆ ಮಣಿದು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಹೊರತು ಅವರ ಸ್ವಂತ ವಿವೇಚನೆಯಿಂದ ಅಲ್ಲ ಎಂದು ನುಡಿದರು.
ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೇ ಹೋರಾಟ ನಡೆಸಿದರೂ ಅದನ್ನು ಸ್ವಾಗತಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಗಣಪತಿ ಅವರು ಆತ್ಮಹತ್ಯೆಗೆ ಶರಣಾದ ಸಂದರ್ಭ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಅವರ ಮನೆಗೆ       ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ನೀಡಿದ್ದಾರೆ. ಆ ಎಲ್ಲಾ ಮುಖಂಡರ ಮುಂದೆಯೂ ಅವರ ಕುಟುಂಬದವರು ಸಿಒಡಿ ತನಿಖೆಯಿಂದ ನ್ಯಾಯ ಸಿಗುವುದಿಲ್ಲ ಎಂಬುದನ್ನು ಹೇಳುತ್ತಲೇ ಬಂದಿದ್ದಾರೆ. ಆದರೆ ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಮಾತ್ರ ನ್ಯಾಯಾಂಗ ಹೋರಾಟ ನಡೆಸುವಂತೆ ಮಾರ್ಗದರ್ಶನ ನೀಡಿದ್ದು, ಅದು ಈಗ ಫಲ ನೀಡುತ್ತಿದೆ ಎಂದೂ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು.
ಗೋಷ್ಠಿಯಲ್ಲಿ ಪಕ್ಷದ  ವಾಣಿಜ್ಯ ಹಾಗೂ ಕೈಗಾರಿಕಾ ಘಟಕದ ಮುಖಂಡ ಪಾರೆಮಜ ಲು ಕುಸುಂ ಕಾರ್ಯಪ್ಪ, ಹಿಂದುಳಿದ ಘಟಕದ ಎ.ಜಿ.ಗೋಪಾಲ್, ವೀರಾಜಪೇಟೆ ಕ್ಷೇತ್ರ ಸಮಿತಿ ಅಧ್ಯಕ್ಷ ಎಸ್.ಹೆಚ್. ಮತೀನ್, ಮಚ್ಚಮಾಡ ಮಾಚಯ್ಯ, ವಕೀಲ ಅಮೃತ್ ಸೋಮಯ್ಯ ಮತ್ತಿತರರು ಹಾಜರಿದ್ದರು.

LEAVE A REPLY