ಭಾರೀ ಮಳೆಗೆ ಹೊಸ್ಮಠ ಸೇತುವೆ ಮುಳುಗಡೆ: ಉಪ್ಪಿನಂಗಡಿ-ಸುಬ್ರಹ್ಮಣ್ಯ ವಾಹನ ಸಂಚಾರ ವ್ಯತ್ಯಯ

ಕಡಬ: ಘಟ್ಟದ ಮೇಲೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಗುಂಡ್ಯ ಹೊಳೆಯಲ್ಲಿ ನೆರೆ ನೀರಿನ ಮಟ್ಟ ಏರಿಕೆಯಾಗಿದ್ದು, ಸೋಮವಾರ ಸಂಜೆಯ ವೇಳೆಗೆ ಕಡಬ ಸಮೀಪದ ಹೊಸ್ಮಠ ಸೇತುವೆ ನೀರಿನಲ್ಲಿ ಮುಳುಗಡೆಯಾಗಿ ಕಡಬದ ಮೂಲಕ ಹಾದು ಹೋಗುವ ಉಪ್ಪಿನಂಗಡಿ-ಸುಬ್ರಹ್ಮಣ್ಯ  ರಾಜ್ಯ ಹೆದ್ದಾರಿಯಲ್ಲಿ  ವಾಹನ ಸಂಚಾರ ವ್ಯತ್ಯಯಗೊಂಡಿತು. ಸಂಜೆ ಸುಮಾರು ೬ ಗಂಟೆಯ ವೇಳೆಗೆ ಮುಳುಗಡೆಯಾಗಿರುವ ಸೇತುವೆಯ ಮೇಲಿನಿಂದ ರಾತ್ರಿಯ ತನಕವೂ ನೆರೆನೀರು ಇಳಿದಿರಲಿಲ್ಲ.  ಸೇತುವೆಯ ಇಕ್ಕೆಲೆಗಳಲ್ಲಿಯೂ ರಕ್ಷಣಾ ಗೇಟುಗಳನ್ನು ಮುಚ್ಚಲಾಗಿದ್ದು, ಕಡಬ ಪೊಲೀಸರು ಹಾಗೂ ಗೃಹರಕ್ಷಕ ಸಿಬಂದಿ ಕಾವಲುನಿರತರಾಗಿದ್ದಾರೆ.
ಬಿಳಿನೆಲೆ ಸೇತುವೆ ಮುಳುಗಡೆ
ಕಡಬದ ಹೊಸಮಠ ಸೇತುವೆ ಮುಳುಗಡೆಯಾಗುವುದಕ್ಕೆ ಮೊದಲೇ ನೆಟ್ಟಣ ಹಾಗೂ ಬಿಳಿನೆಲೆ ಪೇಟೆಯ ನಡುವೆ ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬರುವ ಬಿಳಿನೆಲೆ ಮುಳುಗೆ ಸೇತುವೆಯೂ ನೆರೆನೀರಿನಿಂದ ಮುಳುಗಡೆಯಾಗಿದೆ. ಸಂಜೆ 5 ಗಂಟೆಯ ವೇಳೆಗೆ ಮುಳುಗಡೆಯಾಗಿರುವ ಸೇತುವೆಯ ಮೇಲಿನಿಂದ ರಾತ್ರಿಯ ತನಕವೂ ನೆರೆನೀರು ಇಳಿದಿರಲಿಲ್ಲ. ಸೇತುವೆ ಮುಳುಗಡೆಯಾದ
ಕಾರಣದಿಂದಾಗಿ ಧರ್ಮಸ್ಥಳ-ಸುಬ್ರಹ್ಮಣ್ಯ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಸಂಚಾರ ಮುಂದುವರಿಸಲು ಸಾಧ್ಯವಾಗಲಿಲ್ಲ.

LEAVE A REPLY