ಶಾರದಾ ವಿದ್ಯಾಲಯದ ಭಾರತ್ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳ ಶ್ರೀಲಂಕಾದ ಅಂತಾರಾಷ್ಟ್ರೀಯ ಫ್ರೆಂಡ್‌ಶಿಪ್ ಜಾಂಬೂರಿ

ಮಂಗಳೂರು: ಶ್ರೀಲಂಕಾದಲ್ಲಿ ಆ. 2ರಿಂದ 9ರ ವರೆಗೆ ನಡೆದ ಅಂತಾರಾಷ್ಟ್ರೀಯ ಫ್ರೆಂಡ್‌ಶಿಪ್ ಜಾಂಬೂರಿಯಲ್ಲಿ ಭಾಗವಹಿಸಿ ತಾಯ್ನಾಡಿನ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದ ಹೆಗ್ಗಳಿಕೆ ಮಂಗಳೂರು ಶಾರದಾ ವಿದ್ಯಾಲಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರದ್ದು.
ಈ ಶಿಬಿರಕ್ಕೆ ಭಾರತದಿಂದ ಆಯ್ಕೆಯಾದ ಏಕೈಕ ತಂಡ ಮಂಗಳೂರಿನ ಕೊಡಿಯಾಲಬೈಲಿನಲ್ಲಿರುವ ಶಾರದಾ ವಿದ್ಯಾಲಯ. ಈ ವಿದ್ಯಾ ಸಂಸ್ಥೆಯಿಂದ 4 ಸ್ಕೌಟ್ಸ್, 5 ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಭಾರತದ ಕಂಟಿಜಂಟ್ ನಾಯಕನಾಗಿ ಸ್ಕೌಟ್ ಮಾಸ್ಟರ್ ದಿನೇಶ್ ಕೆ. ಆಯ್ಕೆಗೊಂಡಿದ್ದರು. ಈ ಶಿಬಿರದಲ್ಲಿ 12 ರಾಷ್ಟ್ರಗಳ 1,000ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, ಶಿಬಿರದಲ್ಲಿ ಸಾಹಸಮಯ ಚಟುವಟಿಕೆಗಳು ಪ್ರಮುಖವಾಗಿದ್ದವು.
ಪ್ರವಾಹದ ಸಂದರ್ಭದಲ್ಲಿ ನಡೆಸುವ ರಕ್ಷಣಾ ಕಾರ್ಯದ ಕುರಿತು ಶ್ರೀಲಂಕಾದ ನೌಕಾಪಡೆಯ ಅಽಕಾರಿಗಳು ಮಕ್ಕಳಿಗೆ ಪ್ರಾತ್ಯಕ್ಷಿಕವಾಗಿ ತಿಳಿಸಿಕೊಟ್ಟಿದ್ದಲ್ಲದೆ ಖುದ್ದಾಗಿ ಮಕ್ಕಳಿಂದಲೇ ರಕ್ಷಣಾ ಕಾರ್ಯಗಳ ಅಣುಕು ಪ್ರದರ್ಶನವನ್ನು ಮಾಡಿಸುವುದರ ಮೂಲಕ ಅರಿವು ಮೂಡಿಸಿದರು. ಅದೇ ರೀತಿ ವಾಯುಪಡೆಯು ಕೂಡಾ ವಿಮಾನದ ಮೂಲಕ ನಡೆಸುವ ರಕ್ಷಣಾ ಕಾರ್ಯದ ಕುರಿತು ಮಾಹಿತಿಯನ್ನು ನೀಡಿದರು ಹಾಗೂ ನಮ್ಮ ಮಕ್ಕಳು ನೀಡಿದ ಪ್ರದರ್ಶನಕ್ಕೆ ಮೆಚ್ಚುಗೆಯನ್ನು ಕೂಡಾ ವ್ಯಕ್ತಪಡಿಸಿದರು.
ಈ ಶಿಬಿರದಲ್ಲಿ ತಮ್ಮ ತಮ್ಮ ದೇಶದ ಸಾಂಪ್ರದಾಯಕ ದಿನವನ್ನು ಆಚರಿಸಲಾಗಿ ನಮ್ಮ ಮಕ್ಕಳು ಭಾರತೀಯ ಸಂಸ್ಕೃತಿಯ ಉಡುಗೆ ತೊಡುಗೆ ತೊಟ್ಟು ವಿಜೃಂಭಿಸಿದರು ಹಾಗೂ ಕೋಲಾಟ ನೃತ್ಯವನ್ನು ಪ್ರದರ್ಶಿಸಿ, ಕರಾವಳಿಯ ಆಹಾರ ತಿನಿಸುಗಳನ್ನು ಪ್ರದರ್ಶನಕ್ಕಿಟ್ಟು ಮೆಚ್ಚುಗೆಯನ್ನು ಗಳಿಸಿದರು. ಆ.  7ರಂದು ನಮ್ಮ ತಂಡ ರಕ್ಷಾಬಂಧನವನ್ನು ಆಚರಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ರಾಖಿಯನ್ನು ಕಟ್ಟಿ ಭಾತೃತ್ವದ ಸಂದೇಶವನ್ನು ಸಾರಿದರು.
ಅಲ್ಲದೆ ಶಿಬಿರದಲ್ಲಿ ವಿವಿಧ ಚಟುವಟಿಕೆಗಳಾದ ಹೈಕಿಂಗ್, ನೆಟ್ ಪ್ಲೇಯಿಂಗ್, ಅಡುಗೆ ತಯಾರಿ, ಮುಖವರ್ಣಿಕೆ, ಡ್ರಾಯಿಂಗ್, ಕ್ರಾಫ್ಟ್‌ಗಳನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹೊಸ ಅನುಭವ ಅವಿಸ್ಮರಣೀಯ ನೆನಪುಗಳನ್ನು ಹೊತ್ತು ತಂದಿದ್ದಾರೆ.

LEAVE A REPLY