ಕರುಳಕುಡಿಯ ಎರಡೆರಡು ಬಾರಿ ಮಹಡಿಯಿಂದ ಎಸೆದು ಕೊಂದ ಮಹಿಳೆ

ಬೆಂಗಳೂರು: ಹೆತ್ತ ತಾಯಿಯೇ ತನ್ನ ಕರುಳಕುಡಿಯನ್ನು ಮಹಡಿಯಿಂದ ಕೆಳಕ್ಕೆಸೆದು ಕೊಲೆಗೈದ ವಿಲಕ್ಷಣ ಘಟನೆ ನಗರದ ಜೆಪಿ ನಗರದಲ್ಲಿ ಭಾನುವಾರ ನಡೆದಿದೆ.
ಶ್ರೇಯಾ (9) ಎಂಬಾಕೆಯೇ ತನ್ನ ಹೆತ್ತಬ್ಬೆಯಿಂದ ಕೊಲೆಗೀಡಾದ ನತದೃಷ್ಟೆ. ಈಕೆಯನ್ನು ಕೊಲೆಗೈದ ಅರೋಪದಲ್ಲಿ ತಾಯಿ ಸ್ವಾತಿ ಎಂಬಾಕೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಈಕೆ ಶಾಲೆಯಲ್ಲಿ ಶಿಕ್ಷಕಿ!
ಜೆಪಿ ನಗರದ ಜರಗನಹಳ್ಳಿಯಲ್ಲಿ ನೆಲೆಸಿರುವ ಸ್ವಾತಿ, ಮೂಲತಃ ಕೋಲ್ಕತ್ತದ ನಿವಾಸಿಯಾಗಿದ್ದು ಶಾಲೆಯೊಂದರಲ್ಲಿ ಶಿಕ್ಷಕಿ ಎಂದು ಹೇಳಲಾಗಿದೆ. ಈಕೆಯ ಪತಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಭಾನುವಾರ ಮಧ್ಯಾಹ್ನ ಈಕೆ ವಾಸವಿರುವ ಮನೆಯ ಮೂರನೇ ಮಹಡಿಯಿಂದ ಮಗುವನ್ನು ಕೆಳಕ್ಕೆ ತಳ್ಳಿದ್ದು, ಕೆಳಕ್ಕೆ ಬಂದು ನೋಡಿದಾಗ ಶ್ರೇಯಾ ಜೀವಂತವಿರುವುದು ಗೊತ್ತಾಗಿದೆ. ಮತ್ತೆ ಆಕೆಯನ್ನು ಎತ್ತಿಕೊಂಡು ಹೋದ ಸ್ವಾತಿ ಮತ್ತೊಮ್ಮೆ ಕೆಳಕ್ಕೆ ಎಸೆದಿದ್ದಾಳೆ. ಇಷ್ಟರಲ್ಲಿ ಶ್ರೇಯಾ ಕೊನೆಯುಸಿರೆಳೆದಿದ್ದಾಳೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದಾದ ಬಳಿಕ ಏನೂ ಗೊತ್ತಿಲ್ಲ ಎಂಬಂತೆ ಹೊರಟು ನಿಂತಿದ್ದ ಸ್ವಾತಿಯನ್ನು ಸ್ಥಳೀಯರು ವಿಚಾರಿಸಿದ್ದು, ಬೇಕಾಬಿಟ್ಟಿ ಉತ್ತರ ನೀಡಿದ್ದರಿಂದ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಪೊಲೀಸರ ವಶಕ್ಕೊಪ್ಪಿಸಿದ್ದಾರೆ. ಘಟನೆಗೆ ಕಾರಣವೇನು ಎಂಬುದು ಪೊಲೀಸರ ವಿಚಾರಣೆಯಿಂದ ಇನ್ನಷ್ಟೇ ತಿಳಿದುಬರಬೇಕಿದೆ.

LEAVE A REPLY