ಡೋಕ್ಲಾಮ ಗಡಿ ಬಿಕ್ಕಟ್ಟು ಭವಿಷ್ಯದಲ್ಲಿ ಮುಂದುವರೆಯುತ್ತಲೇ ಇರುತ್ತದೆ : ರಾವತ್

ಪುಣೆ: ಸಿಕ್ಕಿಂ ಗಡಿ ಸೇನೆಯ ಯಥಾಸ್ಥಿತಿಯನ್ನು ಬದಲಿಸಲು ಚೀನಾ ಯತ್ನಿಸುತ್ತಿದ್ದು, ಡೋಕ್ಲಾಮ ಗಡಿ ಬಿಕ್ಕಟ್ಟು ಭವಿಷ್ಯದಲ್ಲಿ ಮುಂದುವರೆಯುತ್ತಲೇ ಇರುತ್ತದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಸಿಕ್ಕಿಂ-ಭೂತಾನ್-ಟಿಬೆಟ್ ತ್ರಿಸಂಯಲ್ಲಿರುವ ಡೋಕ್ಲಾಂ ಬಿಕ್ಕಟ್ಟಿಗೆ ಚೀನಾವೇ ಹೊಣೆ ಎಂದು ದೂಷಿಸಿರುವ ಅವರು, ಚೀನಾದ ಜತೆ ಧ್ವಜಸಭೆಯ ವೇಳೆ ಡೋಕ್ಲಾಂ ಪ್ರಸ್ಥಭೂಮಿಯಲ್ಲಿ ನಾವು ಜೂನ್ ೧೬ಕ್ಕೆ ಮೊದಲಿನ ಸ್ಥಿತಿಗೆ ಮರಳಬೇಕು ಎಂದು ಚೀನಾಗೆ ಸ್ಪಷ್ಟವಾಗಿ ತಿಳಿಸಿದ್ದೇವೆ. ಆದರೆ, ಅದನ್ನು ಯಾವ ರೀತಿ ಕಾರ್ಯರೂಪಕ್ಕೆ ತರಬೇಕೆಂಬ ಬಗ್ಗೆ ನಮ್ಮಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಹೀಗಾಗಿ ಅದನ್ನು ರಾಜತಾಂತ್ರಿಕ ಹಾಗೂ ರಾಜಕೀಯ ಹಂತಗಳಲ್ಲಿ ಬಗೆಹರಿಸಿಕೊಳ್ಳಬೇಕಿದೆ ಎಂದು ಜನರಲ್ ರಾವತ್ ತಿಳಿಸಿದ್ದಾರೆ.
ಪುಣೆಯ ಸಾವಿತ್ರಿಭಾಯ ಫುಲೆ ವಿಶ್ವವಿದ್ಯಾನಿಲಯದ ರಕ್ಷಣಾ ಇಲಾಖೆ ಮತ್ತು ಜಿಯೋ-ಸ್ಟ್ರಾಟೆಜಿಕ್ ಸ್ಟಡೀಸ್ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಈ ಬಗ್ಗೆ ಮಾತನಾಡಿದರು. ವಿವಾದ ಭೂ ಪ್ರದೇಶದ ಹಕ್ಕು ಕುರಿತ ಹೋರಾಟ ಈಗಲೂ ಅಸ್ತಿತ್ವದಲ್ಲಿಯೇ ಇದ್ದು, ವಾಸ್ತವಿಕ ಗಡಿ ನಿಯಂತ್ರಣ ರೇಖೆ ಕುರಿತಂತೆ ಆಗಾಗ ತಪ್ಪುಗ್ರಹಿಕೆಗಳು ಉಂಟಾಗುತ್ತಿರುತ್ತದೆ. ಇಂತಹ ಪರಿಸ್ಥಿತಿಗಳನ್ನು ಎದುರಿಸಲು ನಾವು ಜಂಟಿ ಕಾರ್ಯವಿಧಾನಗಳನ್ನು ಹೊಂದಿರುತ್ತೇವೆ. ಎರಡೂ ಸೇನೆಗಳು ತಮ್ಮ ತಮ್ಮ ಸ್ಥಾನಕ್ಕೆ ಹಿಂದಿರುಗಬೇಕೆಂಬ ಭಾರತದ ಒತ್ತಾಯಕ್ಕೆ ಚೀನಾ ಯಾವುದೇ ಕ್ರಮ ಕೈಗೊಂಡಿಲ್ಲ.
ಹೀಗಾಗಿ ಈ ಬಿಕ್ಕಟ್ಟು ಬಗೆಹರಿದರೂ, ಇಂತಹ ಬಿಕ್ಕಟ್ಟುಗಳು ಪುನರಾವರ್ತನೆಯಾಗುವುದಿಲ್ಲ ಎಂದು ಯೋಧರು ಭಾವಿಸುವಂತಿಲ್ಲ. ಭವಿಷ್ಯದಲ್ಲಿ ಇಂತಹ ಘಟನೆಗಳು ಹೆಚ್ಚುವ ಸಾಧ್ಯತೆಗಳಿವೆ. ಯೋಧರು ಯಾವುದೇ ಕಾರಣಕ್ಕೂ ಗಡಿ ರಕ್ಷಣೆ ವಿಚಾರದಲ್ಲಿ ಮೈಮರೆಯಬಾರದು ಎಂಬುದೇ ನನ್ನ ಸಂದೇಶ ಎಂದು ರಾವತ್ ಹೇಳಿದ್ದಾರೆ.
ತನ್ನ ಸ್ವಾಯತ್ತ ಪ್ರದೇಶ ಟಿಬೆಟ್‌ನಲ್ಲಿ ಚೀನಾ ಕಾರ್ಯಾಚರಣೆಗಳ ಸನ್ನದ್ಧತೆ ಹಾಗೂ ಹಲವಾರು ಸಿದ್ಧತೆಗಳನ್ನು ನಡೆಸುತ್ತಿದ್ದು, ಇದರಿಂದಾಗಿ ಚೀನಿಯ ಪ್ರಾಬಲ್ಯತೆ ಪ್ರಬಲಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಡೋಕ್ಲಾಂ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಸೇನಾ ಶಕ್ತಿ ಕಡಿಮೆ ಇರುವ ಪ್ರದೇಶಗಳಲ್ಲು ನುಸುಳಿ ದಾಳಿ ನಡೆಸಲು ಚೀನಾ ಪ್ರಯತ್ನಿಸುತ್ತಿದೆ. ಹೀಗಾಗಿ ಸೇನೆ ಯಾವಾಗಲೂ ಸನ್ನದ್ಧವಾಗಿರಬೇಕಿದೆ.
ಸಮರಾಭ್ಯಾಸ ನಿರ್ಧಾರವಾಗಿಲ್ಲ
ಗಡಿಯಲ್ಲಿ ಉಭಯ ರಾಷ್ಟ್ರಗಳ ಸೇನೆ ವಾರ್ಷಿಕ ಸಮರಾಭ್ಯಾಸ ನಡೆಸುವುದು ಸಾಮಾನ್ಯವಾಗಿರುತ್ತದೆ. ಒಂದು ವರ್ಷ ಭಾರತೀಯ ಸೇನೆ ನಡೆಸಿದ್ದರೆ, ಮತ್ತೊಂದು ವರ್ಷ ಚೀನೀ ಸೇನೆ ನಡೆಸುತ್ತಿದೆ. ಆದರೆ, ಈ ಬಾರಿ ಅಕ್ಟೋಬರ್‌ತಿಂಗಳಲ್ಲಿ ಸಮರಾಭ್ಯಾಸ ನಡೆಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಈ ಬಾರಿ ಚೀನಾ ಸೈನಿಕರು ಸಮರಾಭ್ಯಾಸ ನಡೆಸಬೇಕಿದೆ. ಉಭಯ ರಾಷ್ಟ್ರಗಳ ನಡುವೆ ಗಡಿ ಬಿಕ್ಕಟ್ಟು ಎದುರಾಗಿರುವುದರಿಂದ ಚೀನೀ ಸೇನೆ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ರಾವತ್ ಹೇಳಿದ್ದಾರೆ.
ಪಾಕ್ ವಿರುದ್ಧ ಆಕ್ರೋಶ
ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಧಟತನವನ್ನು ಪ್ರದರ್ಶಿಸುತ್ತಿರುವ ಪಾಕಿಸ್ತಾನದ ವಿರುದ್ಧವೂ ರಾವತ್ ಕಿಡಿಕಾರಿದ್ದಾರೆ. ಜಿಹಾದಿಗಳ ಮೇಲೆ ಪಾಕಿಸ್ತಾನ ಅವಲಂಬನೆಗೊಂಡಿದ್ದು, ಜಿಹಾದಿಗಳಿಗೆ ಬೆಂಬಲ ನೀಡುತ್ತಿದೆ. ಇಸ್ಲಾಂ ಸಿದ್ಧಾಂತ ಹಾಗೂ ತನ್ನ ಮೂಲಭೂತವಾದವನ್ನು ಹರಡಲು ಪಾಕಿಸ್ತಾನ ಯತ್ನಿಸುತ್ತಿದ್ದು, ಇದು ಕೇವಲ ಭಾರತಕ್ಕಷ್ಟೇ ಅಲ್ಲದೆ, ಚೀನಾ ಸೇರಿದಂತೆ ದಕ್ಷಿಣ ಹಾಗೂ ಪೂರ್ವ ಏಷ್ಯಾ ರಾಷ್ಟ್ರಗಳಿಗೂ ಬೆದರಿಕೆಯಾಗಲಿದೆ ಎಂದು ತಿಳಿಸಿದ್ದಾರೆ.

LEAVE A REPLY