ಗೊಂದಲದ ಗೂಡಾದ ಎಐಎಡಿಎಂಕೆ : ಪಳನಿ ವಜಾ ಮಾಡಿದ ದಿನಕರನ್, ಸರ್ಕಾರ ವಜಾಕ್ಕೆ ಡಿಎಂಕೆ ಆಗ್ರಹ

file photo

ಚೆನ್ನೈ:ತಮಿಳುನಾಡಿನ ಆಳುವ ಎಡಿಎಂಕೆ ಪಕ್ಷದ ಬಣ ಜಗಳ ಇದೀಗ ಮತ್ತಷ್ಟು ಬಿಗಡಾಯಿಸಿದೆ. ಪಕ್ಷದ ಉಪ ಮಹಾಕಾರ್ಯದರ್ಶಿ ಟಿಟಿವಿ ದಿನಕರ್ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರನ್ನು ಪಕ್ಷದ ಸೇಲಂ ಜಿಲ್ಲಾ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಿದ್ದಾರೆ. ತನ್ಮಧ್ಯೆ ಪಳನಿಸ್ವಾಮಿ ಸರಕಾರಕ್ಕೆ ಬೆಂಬಲ ಹಿಂತೆಗೆದುಕೊಂಡ ದಿನಕರನ್ ಬಣಕ್ಕೆ ಇನ್ನಿಬ್ಬರು ಎಡಿಎಂಕೆ ಶಾಸಕರು ಸೇರಿ ಒಟ್ಟು ಬಲ 21ಕ್ಕೇರಿದೆ. ಅವರೆಲ್ಲರೂ ಈಗ ಪುದುಚೇರಿಯಲ್ಲಿ ತಾರಾ ಹೊಟೇಲ್‌ನಲ್ಲಿ ತಂಗಿದ್ದಾರೆ.
ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಬಣಗಳು ಕಡೆಗೂ ಒಂದಾಗಿ ತಮಿಳುನಾಡಿನಲ್ಲಿ ಎಡಿಎಂಕೆ ಸರಕಾರ ಗಟ್ಟಿಗೊಳಿಸಿದಾಗ ಸಿಡಿದೆದ್ದ ದಿನಕರನ್ ಗುಂಪು (19 ಎಂಎಲ್‌ಎಗಳು) ರಾಜಭವನಕ್ಕೆ ತೆರಳಿ ಸರಕಾರಕ್ಕೆ ಬೆಂಬಲ ಹಿಂತೆಗೆದುಕೊಂಡುದಾಗಿ ಹೇಳಿ ಎಲ್ಲ 19 ಶಾಸಕರು ಸಹಿ ಹಾಕಿದ ಪತ್ರವನ್ನು ರಾಜ್ಯಪಾಲರಿಗೆ ಕೊಟ್ಟಿದ್ದರು. ಮತ್ತಿಬ್ಬರು ಈ ಗುಂಪನ್ನು ಸೇರಿ ತಮಿಳುನಾಡಿನ ಎಡಿಎಂಕೆ ಸರಕಾರ ಸದ್ಯ ಬಹುಮತ ಕಳೆದುಕೊಂಡಿದೆ ಎಂದು ದಿನಕರನ್ ಹೇಳುತ್ತಿದ್ದಾರೆ.
ಆ. 21ರಂದು ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಬಣಗಳು ವಿಲೀನಗೊಂಡಿದ್ದವು. ದಿನಕರನ್ ಬಣದ 19 ಶಾಸಕರ ವಿರುದ್ಧ ಅನರ್ಹರನ್ನಾಗಿ ಮಾಡುವ ಕ್ರಮ ಜರಗಿಸಲು ಸ್ಪೀಕರ್ ಧನಪಾಲ್‌ರಿಗೆ ಸರಕಾರದ ಮುಖ್ಯ ಸಚೇತಕ ರಾಜೇಂದ್ರನ್ ಪತ್ರ ಬರೆದ ನಂತರ ಅವರನ್ನು ದಿನಕರನ್ ಅರಿಯಲೂರು ಜಿಲ್ಲಾ ಕಾರ್ಯದರ್ಶಿ ಹುದ್ದೆಯಿಂದ ತೆಗೆದು ಹಾಕಿದ್ದಾರೆ.
ದಿನಕರನ್ ಬಣದ ಎಲ್ಲಾ 21 ವಿಧಾನಸಭಾ ಸದಸ್ಯರು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರಿಗೆ ನೀಡಿರುವ ಪತ್ರದಲ್ಲಿ ಮುಖ್ಯಮಂತ್ರಿ ಪಳನಿಸ್ವಾಮಿ ಅವರಲ್ಲಿ ವಿಶ್ವಾಸವಿಲ್ಲ ಎಂದು ಹೇಳಿದ್ದಾರೆ. ಪ್ರತಿಪಕ್ಷ ಡಿಎಂಕೆ ಸೇರಿದಂತೆ ಎಲ್ಲ ವಿಪಕ್ಷಗಳು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಹುಮತ ಸಾಬೀತುಪಡಿಸುವಂತೆ ನಿರ್ದೇಶನ ನೀಡಲು ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ.
ಬಿಜೆಪಿ ಸೇರಿದ ಎಐಎಡಿಎಂಕೆ 15 ಮುಖಂಡರು
ತಮಿಳುನಾಡು ರಾಜಕಾರಣದಲ್ಲಿ ಮೇಲಿಂದ ಮೇಲೆ ಸಮಸ್ಯೆಯನ್ನು ಎದುರಿಸುತ್ತಿರುವ ಎಐಎಡಿಎಂಕೆಗೆ ಇದೀಗ ಮತ್ತೊಮ್ಮೆ ಹಿನ್ನಡೆಯಾದಂತಾಗಿದೆ. ಒಟ್ಟು 15 ಎಐಎಡಿಎಂಕೆಯ ಮುಖಂಡರು ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಮಾಜಿ ಕೈಗಾರಿಕಾ ಸಚಿವ ನೈನಾರ್ ನಾಗೇಂದ್ರ, ಶ್ರೀನಿವಾಸನ್, ಪಿ. ಕಾತ್ಯಾಯಿನಿ ಸೇರಿದಂತೆ 15 ಮುಖಂಡರು ದಿಲ್ಲಿಯಲ್ಲಿ ಪಕ್ಷವನ್ನು ಸೇರಿದ್ದಾರೆ.

LEAVE A REPLY