ಕೂಡಿಗೆ: ಒಡೆಯುವ ಹಂತಕ್ಕೆ ತಲುಪಿದ ಹಾರಂಗಿ ಅಣೆಕಟ್ಟೆಯ ಮುಖ್ಯ ನಾಲೆ

Hosadigantha Photo

ಕೂಡಿಗೆ: ಕೊಡಗು, ಮೈಸೂರು ಮತ್ತು ಹಾಸನ ಜಿಲ್ಲೆಗಳ ಸಾವಿರಾರು ಹೆಕ್ಟೇರ್ ಪ್ರದೇಶಗಳಿಗೆ ನೀರು ಹರಿಸುವ ಚಿಂತನೆಯಡಿ ನಿರ್ಮಾಣಗೊಂಡಿರುವ ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಮುಖ್ಯ ನಾಲೆ  ಬಿರುಕು ಬಿಟ್ಟಿದ್ದು,   ನೀರಿನ ಒತ್ತಡಕ್ಕೆ ಒಡೆಯುವ ಹಂತ ತಲುಪಿದೆ.
ಹಾರಂಗಿ ಅಣೆಕಟ್ಟೆಯ ನಿರ್ಮಾಣದ ಸಂದರ್ಭ ಕಡಿಮೆ ಅಚ್ಚುಕಟ್ಟು ವ್ಯಾಪ್ತಿಯನ್ನು ಗುರುತಿಸಲಾಗಿತ್ತು. ಅಂದರೆ ಮುಖ್ಯ ನಾಲೆಯ ಮೂಲಕ ಕಣಿವೆಯವರೆಗೆ ಹರಿಯುವ ನೀರು ಅನಂತರ ಎಡ ದಂಡೆ ಮತ್ತು ಬಲದಂಡೆ ನಾಲೆಗಳಾಗಿ ಕವಲೊಡೆಯುತ್ತದೆ. ನಾಲೆಯ ನಿರ್ಮಾಣದ ಸಂದರ್ಭ ಹಾರಂಗಿ ಅಣೆಕಟ್ಟೆಯ ಸಮೀಪದ ಮಾವಿನ ಹಳ್ಳದ ತಗ್ಗು ಪ್ರದೇಶದಲ್ಲಿ ನಾಲೆಯ ನೀರು ಹರಿಯಲು ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ, ಅಚ್ಚುಕಟ್ಟು ಪ್ರದೇಶ ಹೆಚ್ಚಾದಂತೆ ಅಣೆಕಟ್ಟೆಯಿಂದ ಮುಖ್ಯ ನಾಲೆಯಲ್ಲಿ ಹೆಚ್ಚು ನೀರು ಹರಿಸಲಾಗುತ್ತಿದೆ. ಮೊದಲು ನಿರ್ಮಾಣ ಮಾಡಿದ ನಾಲೆಯ ಸೇತುವೆ ಕಿರಿದಾಗಿರುವುದರಿಂದ ಹಾಗೂ ತಿರುವಿನ ಸ್ಥಳವಾಗಿರುವುದರಿಂದ ನೀರಿನ ಒತ್ತಡ ಹೆಚ್ಚಾಗಿ ನಾಲೆ ಬಿರುಕು ಬಿಟ್ಟಿದ್ದು, ಹರಿಯುವ ನೀರು ಸೋರಿಕೆಯಾಗುತ್ತಿದೆ.
ಕಳೆದ ವರ್ಷ ಈ ಸ್ಥಳಕ್ಕೆ ಅಣೆಕಟ್ಟೆಯ ಅನುದಾನದಲ್ಲಿ ನಾಲೆಯ ತಳದ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಆದರೆ, ಇಕ್ಕೆಲಗಳ ಕಾಮಗಾರಿ ಮಾಡದೆ ಇರುವುದರಿಂದ ನೀರಿನ ಸೋರಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಮರಳು ತುಂಬಿದ ಮೂಟೆಗಳನ್ನು ನೀರು ಸೋರುವಿಕೆಯ ಜಗಕ್ಕೆ ಹಾಕಲಾಗಿದೆ.
ಕಳೆದ ಒಂದು ವಾರದಿಂದ ನಾಲೆಯಲ್ಲಿ ಹುಣಸೂರು ಮತ್ತು ಅರಕಲಗೂಡು ತಾಲೂಕುಗಳ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಉದ್ದೇಶದಿಂದ ನಾಲೆಗಳಿಗೆ ಹೆಚ್ಚು ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಈ ಜಾಗದಲ್ಲಿ ಇದೀಗ ಬಿರುಕು ಅಧಿಕವಾಗುವುದರ ಜೊತೆಗೆ ನೀರಿನ ಸೆಳೆತ ಹೆಚ್ಚಾಗಿ ಹಳ್ಳಕ್ಕೆ ಹರಿಯುತ್ತಿದೆ.
ಈ ಸ್ಥಳದ ಕೆಳಭಾಗದಲ್ಲಿ ಅನೇಕ ರೈತರು ವ್ಯವಸಾಯ ಮಾಡುತ್ತಿದ್ದು, ಸೋರಿಕೆಯ ನೀರು  ಜಮೀನಿನ ಮಣ್ಣನ್ನು ಕೆಳಭಾಗಕ್ಕೆ   ಹೊತ್ತೊಯ್ಯುತಿದೆ. ಇದೇ ಸ್ಥಳದಲ್ಲಿ 1994ರಲ್ಲಿ ನಾಲೆ  ಒಡೆದುಹೋಗಿ ನೂರಾರು ಎಕರೆಯಲ್ಲಿ ಬೆಳೆದ ಬೆಳೆ ನಷ್ಟವಾಗಿತ್ತು. ಸಮೀಪದಲ್ಲಿದ್ದ ರೈತರ ಮನೆಗಳು ಅಪಾಯದಿಂದ ಪಾರಾಗಿದ್ದವು. ಬೆಳೆ ನಷ್ಟಕ್ಕೆ ಅಂದಿನ ಸರಕಾರ ಪರಿಹಾರ ಒದಗಿಸಿತ್ತು. ಆದರೆ, ಕಳೆದ ೫ ವರ್ಷದ ಹಿಂದೆ ಮುಖ್ಯ ನಾಲೆಯ ಬಲಭಾಗದ ಗೋಡೆಗೆ ಸಮರ್ಪಕವಾಗಿ ಕಾಮಗಾರಿ ನಿರ್ವಹಿಸದೇ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚು ನೀರು ಹಳ್ಳಕ್ಕೆ ಹರಿಯುತ್ತಿದೆ. ಶೀಘ್ರವಾಗಿ ನಾಲೆಯನ್ನು ಸರಿಪಡಿಸಿ, ಮುಂದೊಂದು ದಿನ ನಡೆಯಬಹುದಾದ ಭಾರೀ ಅನಾಹುತವನ್ನು ತಡೆಯಬೇಕಿದೆ ಎಂದು  ಹಾರಂಗಿ ನೀರಾವರಿ ಮಹಾಮಂಡಲದ ನಿರ್ದೇಶಕ ಐ.ಎಸ್. ಗಣೇಶ್, ನೀರು ಬಳಕೆದಾರರ ಸಂಘದ ನಿರ್ದೇಶಕ ಮಂಜುನಾಥ್, ನಾಗರಾಜ್, ಕೃಷ್ಣ, ಈ ವ್ಯಾಪ್ತಿಯ ರೈತರಾದ ಅಚ್ಚಯ್ಯ, ಮಾದಪ್ಪ, ಜಾನಮ್ಮ ಆಗ್ರಹಿಸಿದ್ದಾರೆ.

LEAVE A REPLY