ಉಡುಪಿ ಶ್ರೀಪಲಿಮಾರು ಮಠದ ಪರ್ಯಾಯೋತ್ಸವ ಪೂರ್ವಭಾವಿ ಕಟ್ಟಿಗೆ ಮುಹೂರ್ತ ಸಂಪನ್ನ

Hosadigantha Photo

ಉಡುಪಿ: ಮುಂದಿನ ವರ್ಷ ಜನವರಿ 18ರಂದು ನಡೆಯುವ ಉಡುಪಿ ಶ್ರೀಪಲಿಮಾರು ಮಠದ ಪರ್ಯಾಯೋತ್ಸವದ ಪೂರ್ವಭಾವಿಯಾಗಿ ಕಟ್ಟಿಗೆ ಮುಹೂರ್ತವು ಭಾನುವಾರ ಬೆಳಗ್ಗೆ ಸಂಪನ್ನಗೊಂಡಿತು
ಪಲಿಮಾರು ಶ್ರೀವಿದ್ಯಾಶತೀರ್ಥ ಸ್ವಾಮೀಜಿ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ವ್ರತನಿರತರಾಗಿರುವುದರಿಂದ ಶ್ರೀಗಳ ಅನುಪಸ್ಥಿತಿಯಲ್ಲಿ ಕಟ್ಟಿಗೆ ಮುಹೂರ್ತದ ಪೂಜಾ ವಿ-ವಿಧಾನಗಳನ್ನು ಮಠದ ದಿವಾನ ವೇದವ್ಯಾಸ ತಂತ್ರಿ ಮತ್ತು ವ್ಯವಸ್ಥಾಪಕ ಬಲರಾಮ ಭಟ್ ನೇತೃತ್ವ ಹಾಗೂ ಹೆರ್ಗ ವೇದವ್ಯಾಸ ತಂತ್ರಿ ಪೌರೋಹಿತ್ಯದಲ್ಲಿ ನಡೆದವು.
ಬೆಳಗ್ಗೆ ಮಠದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ನಂತರ ಶ್ರೀಅನಂತೇಶ್ವರ, ಶ್ರೀಚಂದ್ರಮಳೀಶ್ವರ ಮತ್ತು ಶ್ರೀಕೃಷ್ಣ ಮುಖ್ಯಪ್ರಾಣ ದೇವರಿಗೆ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಭೋಜನ ಶಾಲೆ ಮುಖ್ಯಪ್ರಾಣ, ಸುಬ್ರಹ್ಮಣ್ಯ ಗುಡಿ, ನವಗ್ರಹ, ವೃಂದಾವನಗಳಲ್ಲಿ ಪೂಜೆ ಮಾಡಿ ವಾಪಾಸು ಪಲಿಮಾರು ಮಠಕ್ಕೆ ಬರಲಾಯಿತು.
ಬಳಿಕ ಎಲ್ಲ ದೇವರ ಅನುಗ್ರಹದೊಂದಿಗೆ ಬಿರುದಾವಳಿ, ಬ್ಯಾಂಡ್-ವಾದ್ಯಗಳೊಂದಿಗೆ ಮಠದ ಭಕ್ತರು ತಲೆ ಮೇಲೆ ಕಟ್ಟಿಗೆ ಹೊತ್ತು ರಥಬೀದಿಯಲ್ಲಿ ಪ್ರದಕ್ಷಿಣೆ ಬಂದು, ಮಧ್ವಸರೋವರದ ಪಾರ್ಶ್ವಕ್ಕೆ ಆಗಮಿಸಿದರು. ಅಲ್ಲಿ ಮಠದ ಮೇಸ್ತ್ರಿ ಕಟ್ಟಿಗೆ ಜೋಡಿಸುವ ಮೂಲಕ ಕಟ್ಟಿಗೆ ಮುಹೂರ್ತಕ್ಕೆ ಚಾಲನೆ ನೀಡಿದರು. ಕಟ್ಟಿಗೆ ಮುಹೂರ್ತ ನೆರವೇರಿಸುವ ಪೂರ್ವದಲ್ಲಿ ನವಗ್ರಹ ಪೂಜೆ ನಡೆಯಿತು. ನಂತರ ಅಷ್ಟಮಠಗಳ ಸಹಿತ ಭಂಡಾರಕೇರಿ, ಉತ್ತರಾದಿ ಮಠಗಳ ಪ್ರತಿನಿಗಳಿಗೆ ನವಧಾನ್ಯಗಳನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಪರ್ಯಾಯ ಪೇಜಾವರ ಮಠದ ದಿವಾನ ರಘುರಾಮ ಆಚಾರ್ಯ, ಸಗ್ರಿ ರಾಘವೇಂದ್ರ ಆಚಾರ್ಯ, ಕಟೀಲು ಲಕ್ಷ್ಮೀನಾರಾಯಣ ಆಸ್ರನ್ಣ, ಹರಿಕೃಷ್ಣ ಪುನರೂರು, ಪ್ರದೀಪ್ ಕಲ್ಕೂರ, ಸ್ವಾಗತ ಸಮಿತಿ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಏನಿದು ಕಟ್ಟಿಗೆ ಮುಹೂರ್ತ?
ಪರ್ಯಾಯ ಪೂರ್ವಭಾವಿಯಾಗಿ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ ಮತ್ತು ಭತ್ತ ಮುಹೂರ್ತ (ಧಾನ್ಯ ಮುಹೂರ್ತ) ಎಂಬ ನಾಲ್ಕು ಮುಹೂರ್ತಗಳನ್ನು ಆಚರಿಸಲಾಗುತ್ತದೆ. ಮುಂಬರುವ ಪರ್ಯಾಯ ಕಾಲದಲ್ಲಿ ದೇವರ ನೈವೇದ್ಯ ಮತ್ತು ಶ್ರೀಕೃಷ್ಣ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದ ತಯಾರಿಸಲು ಅಗಾಧ ಪ್ರಮಾಣದಲ್ಲಿ ಕಟ್ಟಿಗೆಯ ಅವಶ್ಯಕತೆ ಇರುವುದರಿಂದ ಎರಡು ವರ್ಷಗಳ ಪರ್ಯಾಯ ಕಾಲಕ್ಕೆ ಬೇಕಾದ ಕಟ್ಟಿಗೆ ಸಂಗ್ರಹಿಸಬೇಕು. ಕಟ್ಟಿಗೆ ಮಳೆ ನೀರಿಗೆ ಒದ್ದೆಯಾಗದಂತೆ ಅವುಗಳನ್ನು ರಥದ ಮಾದರಿಯಲ್ಲಿ ಆಕರ್ಷಕವಾಗಿ ಜೋಡಿಸಿಡುತ್ತಾರೆ. ರಥದ ನಿರ್ಮಾಣಕ್ಕೆ ಈ ಕಟ್ಟಿಗೆ ಮುಹೂರ್ತ ನಾಂದಿಯಾಗುತ್ತದೆ. ಈ ಕಟ್ಟಿಗೆ ರಥದ ಮೇಲ್ಭಾಗದಲ್ಲಿ ಶಿಖರ ಸ್ಥಾಪನೆಯು ಪರ್ಯಾಯ ಪೂರ್ವಭಾವಿ ಪ್ರಕ್ರಿಯೆಗಳಲ್ಲಿ ಕೊನೆಯ ಮುಹೂರ್ತವಾದ ಭತ್ತ ಮುಹೂರ್ತದಂದು ನಡೆಯಲಿದ್ದು, ಅಂದು ಕಟ್ಟಿಗೆ ರಥ ನಿರ್ಮಾಣ ಸಂಪೂರ್ಣಗೊಳ್ಳುತ್ತದೆ.

LEAVE A REPLY