ಕರಾವಳಿಯಾದ್ಯಂತ ಎಡೆಬಿಡದೆ ಸುರಿಯುತ್ತಿದೆ ಮಳೆ: ಮನೆ ಮೇಲೆ ಮರ ಬಿದ್ದು 40 ಸಾವಿರ. ರೂ ನಷ್ಟ

Hosadigantha Photo

ಉಡುಪಿ: ಕರಾವಳಿಯಾದ್ಯಂತ ಕಳೆದ 10ದಿನಗಳಿಂದ ಮಳೆ ಚುರುಕುಗೊಂಡಿದ್ದು, ಉಡುಪಿ ಜಿಲ್ಲೆಯಲ್ಲಿ ಶನಿವಾರ ಸಂಜೆಯಿಂದ ನಿರಂತರ ಮಳೆಯಾಗುತ್ತಿದೆ. ಭಾನುವಾರ ತಡರಾತ್ರಿಯವರೆಗೂ ಮಳೆ ಮುಂದುವರಿದಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಮೀನುಗಾರಿಕೆಗೆ ತೆರಳುವ ಮೀನುಗಾರರು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.
ಉಡುಪಿ ತಾಲೂಕಿನ ಮಣಿಪಾಲ, ಮಲ್ಪೆ, ಕಾಪು, ಪಡುಬಿದ್ರಿ, ಶಿರ್ವ, ಮೂಡುಬೆಳ್ಳೆ, ಶಂಕರಪುರ, ಬ್ರಹ್ಮಾವರ, ಕಲ್ಯಾಣಪುರ, ಕೋಟ, ಬಾರ್ಕೂರು, ಹಿರಿಯಡ್ಕ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಶನಿವಾರ ಸಂಜೆ ಆರಂಭವಾದ ಮಳೆ ಎಡೆಬಿಡದೆ ಸುರಿದಿದೆ. ಕೆಲವೊಮ್ಮೆ ಜೋರಾಗಿ ಬೀಸಿದ ಗಾಳಿಯೊಂದಿಗೆ ಮಳೆ ಸುರಿದಿದೆ. ಗಾಳಿ ಮಳೆಗೆ ಉದ್ಯಾವರ ಗ್ರಾಮದ ಪಡುಕರೆ ಕೂಸು ಮರಕಾಲ್ತಿ ಅವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಇದರಿಂದ 40 ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ.
ಕಾರ್ಕಳದಲ್ಲಿ ವ್ಯಾಪಕ ಮಳೆ
ಕಾರ್ಕಳ ತಾಲೂಕಿನಲ್ಲಿಯೂ ವ್ಯಾಪಕ ಮಳೆಯಾಗಿದೆ. ಕಾರ್ಕಳ, ಕೆರ್ವಾಶೆ, ಮಾಳ, ಬಜಗೋಳಿ, ಹೊಸ್ಮಾರು, ಸಾಣೂರು, ಬೆಳ್ಮಣ್ಣು, ಬೈಲೂರು, ಕುಕ್ಕುಂದೂರು, ಹೆಬ್ರಿ, ಮುದ್ರಾಡಿ, ಅಜೆಕಾರು ಸೇರಿದಂತೆ ತಾಲೂಕಿನಾದ್ಯಂತ ನಿರಂತರವಾಗಿ ಉತ್ತಮ ಮಳೆ ಬಂದಿದೆ. ಕುಂದಾಪುರ ತಾಲೂಕಿನಲ್ಲಿಯೂ ಸಾಧಾರಣ ಮಳೆಯಾಗಿದ್ದು, ಮುಂಜಾನೆ ಮೋಡ ಕವಿದ ವಾತಾವರಣವಿತ್ತು. ಭಾನುವಾರ ಮಧ್ಯಾಹ್ನದ ಬಳಿಕ ಕೊಲ್ಲೂರು, ಬೈಂದೂರು, ಕುಂದಾಪುರ, ಸಿದ್ದಾಪುರ, ಶಂಕರನಾರಾಯಣ ಮೊದಲಾದೆಡೆ ಉತ್ತಮ ಮಳೆ ಸುರಿದಿದೆ. ತೆಕ್ಕಟ್ಟೆ, ಕೋಟೇಶ್ವರ ಸುತ್ತಮುತ್ತ ಮಳೆಯಾಗಿದೆ.
ಜಿಲ್ಲೆಯ ಪ್ರಮುಖ ನದಿಗಳಾದ ಸ್ವರ್ಣಾ, ಸೀತಾ, ವಾರಾಹಿ, ಸೌಪರ್ಣಿಕಾ, ಕುಬ್ಜಾ, ಚಕ್ರಾ, ಮಡಿಸಾಲು ಹೊಳೆ, ಉದ್ಯಾವರ ಹೊಳೆಗಳಲ್ಲಿ ನೀರು ಮೈದುಂಬಿ ಹರಿಯುತ್ತಿದೆ. ಇದೇ ರೀತಿ ಮಳೆ ನಿರಂತರವಾಗಿ ಮುಂದುವರಿದರೆ ನದಿಗಳು ಅಪಾಯದ ಮಟ್ಟ ಮೀರಿ ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ನೆರೆ ನೀರು ತುಂಬಿಕೊಳ್ಳುವ ಸಾಧ್ಯತೆ ಇದೆ
ಚೌತಿಗೆ ತಣ್ಣೀರೆರಚಿದ ಮಳೆ
ಉಡುಪಿ ಜಿಲ್ಲೆಯ ಅಲ್ಲಲ್ಲಿ ಸಾರ್ವಜನಿಕ ಗಣೇಶೋತ್ಸವ ಗಳು ನಡೆಯುತ್ತಿವೆ. ಆದರೆ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಗಣೇಶೋತ್ಸವದ ಸಂಭ್ರಮಕ್ಕೆ ತಣ್ಣೀರೆರಚಿದೆ. ವಿಸರ್ಜನಾ ಮೆರವಣಿಗೆಗಳು, ಇತರೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಾಗವಹಿಸುವ ಜನರು ಮಳೆಯಿಂದ ತ್ರಾಸಪಟ್ಟರು. ಮಳೆಯಲ್ಲಿ ಒದ್ದೆಯಾಗುತ್ತಲೇ ಮೆರವಣಿಗಳು ನಡೆದವು.

LEAVE A REPLY