ಮಡಿಕೇರಿಯಲ್ಲಿ ರಸ್ತೆ ಗುಂಡಿಗಳ ಕಿರಿಕಿರಿ: ಮುಸುಕಿದ ಮಂಜಿನಲ್ಲಿ ಪ್ರವಾಸಿಗರಿಗೂ ಸಂಕಷ್ಟ

Hosadigantha Photo

ಮಡಿಕೇರಿ: ನಗರದಲ್ಲಿ ಕಳೆದ ಹತ್ತು ದಿನಗಳಿಂದ ಮಳೆಯಾಗುತ್ತಿದ್ದು, ಮೈ ಕೊರೆಯುವ ಚಳಿಯ ಸಹಿತ ಮಂಜು ಮುಸುಕಿದ ವಾತಾವರಣವಿದೆ. ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಮಂಜಿನ ನಡುವೆ ಸಂಚಾರ ಅಪಾಯ ಕಾರಿ ಎನಿಸಿದೆ.
ಮಳೆಗಾಲದ ಮಳೆ ಮುಗಿದೇ ಹೋಯಿತು ಎಂದು ನಿರಾಶಾಭಾವ ಮೂಡುತ್ತಿರುವಾಗಲೇ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ರೈತಾಪಿ ವರ್ಗದ ಮೊಗದಲ್ಲಿ ನಗುವನ್ನು ಮೂಡಿಸಿದೆ. ಆದರೆ ನಗರದ ಮಂದಿ ಕಿರಿಕಿರಿ ಅನುಭವಿಸುವಂತ್ತಾಗಿದೆ.
ನಗರಸಭೆಯ ಆಡಳಿತ ವ್ಯವಸ್ಥೆಯ ವೈಫಲ್ಯದಿಂದಾಗಿ ಅವ್ಯವಸ್ಥೆಗಳು ನಗರ ತುಂಬಾ ವ್ಯಾಪಿಸಿದ್ದು, ನಾಗರಿಕರು ಹಾಗೂ ಪ್ರವಾಸಿಗರು ಸಂಕಷ್ಟವನ್ನು ಎದುರಿಸಬೇಕಾಗಿದೆ. ಮಡಿಕೇರಿಗೆ ಸರಿ ಹೊಂದದ ಒಳಚರಂಡಿ ವ್ಯವಸ್ಥೆಗಾಗಿ ರಸ್ತೆಯ ಮಧ್ಯ ಭಾಗವನ್ನೇ ಕತ್ತರಿಸಿದ ಪರಿಣಾಮವಾಗಿ ಇಂದು ನಗರದ ಯಾವುದೇ ರಸ್ತೆಗಳು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಮಳೆ ಇಲ್ಲದಾಗ ಹೇಗೋ ಸುಧಾರಿಸಿಕೊಂಡು ವಾಹನವನ್ನು ಚಲಾಯಿಸಬಹುದಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ರಸ್ತೆಗಳು ಮತ್ತಷ್ಟು ಹದಗೆಟ್ಟಿವೆ. ಸಂಪೂರ್ಣವಾಗಿ ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಮತ್ತು ದಟ್ಟ ಮಂಜು ಕವಿಯುತ್ತಿರುವುದರಿಂದ ವಾಹನ ಚಾಲಕರು ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಹಗಲಿನ ವೇಳೆಯಲ್ಲೇ ದೀಪಗಳನ್ನು ಉರಿಸಿ ಮುಂದೆ ಸಾಗಿದರೂ ಗುಂಡಿಗಳಲ್ಲಿ ಚಕ್ರ ಬೀಳುವುದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ದ್ವಿಚಕ್ರ ವಾಹನ ಚಾಲಕರಂತೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡೆ ಗುಂಡಿ ಬಿದ್ದ ರಸ್ತೆಗಳಲ್ಲಿ ಸರ್ಕಸ್ ಮಾಡಬೇಕಾಗಿದೆ. ಪಾದಾಚಾರಿಗಳ ಪಾಡು ಇದಕ್ಕಿಂತ ಭಿನ್ನವಾಗಿಲ್ಲ. ವಾಹನಗಳು ಹಾರಿಸುವ ಕೆಸರಿನ ಸಿಂಚನದೊಂದಿಗೆ ಕೊರೆಯುವ ಚಳಿಯ ನಡುವೆ ಸಾಗಬೇಕಾದ ದುಸ್ಥಿತಿ ಇದೆ. ಯಾವುದೇ ಚರಂಡಿಗಳಲ್ಲಿ ನೀರು ಸಮರ್ಪಕವಾಗಿ ಹರಿಯುತ್ತಿಲ್ಲ ಮತ್ತು ರಸ್ತೆ ಬದಿಯ ಕಾಡು ಕಡಿದು ಸಂಚಾರಕ್ಕೆ ಯೋಗ್ಯ ಮಾರ್ಗದ ವ್ಯವಸ್ಥೆಯನ್ನು ಮಾಡಿಲ್ಲ. ಕಸ ವಿಲೇವಾರಿಯೂ ಸಮರ್ಪಕವಾಗಿ ನಡೆಯದ ಕಾರಣ ಕೊಳೆತು ನಾರುತ್ತಿರುವ ತ್ಯಾಜ್ಯಗಳ ನಡುವೆಯೇ ಪಾದಚಾರಿಗಳು ಸಾಗಬೇಕಾಗಿದೆ.
ಗಣೇಶೋತ್ಸವದ ಮಂಟಪಗಳು ಗುಂಡಿ ಬಿದ್ದ ರಸ್ತೆಗಳಲ್ಲೇ ಕಷ್ಟದಿಂದ ಮೆರವಣಿಗೆಯಲ್ಲಿ ಸಾಗುತ್ತಿದ್ದು, ಸೆಪ್ಟಂಬರ್ ಕೊನೆ ವಾರದಲ್ಲಿ ನಡೆಯುವ ದಸರಾ ಹಬ್ಬಕ್ಕೂ ರಸ್ತೆ ದುರಸ್ತಿ ಯಾಗುವುದು ಕಷ್ಟ ಸಾಧ್ಯವಾಗಲಿದೆ.
ಗುಂಡಿಮಯ
ನಗರದ ಮಂಗೇರಿರ ಮುತ್ತಣ್ಣ ವೃತ್ತ, ಖಾಸಗಿ ಬಸ್ ನಿಲ್ದಾಣ, ಇಂದಿರಾಗಾಂಧಿ ವೃತ್ತ, ರೇಸ್‌ಕೋರ್ಸ್ ರಸ್ತೆ, ಕಾಲೇಜು ರಸ್ತೆಗಳು ಸಂಪೂರ್ಣವಾಗಿ ಗುಂಡಿಮಯವಾಗಿದ್ದು, ಸಂಚಾರ ಅಸಾಧ್ಯವೆನಿಸಿದೆ. ನಗರಸಭೆಯ ಆಡಳಿತ ವೈಫಲ್ಯವೇ ಈ ಅವ್ಯವಸ್ಥೆಗಳಿಗೆ ಕಾರಣವೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸೆ. 20ರೊಳಗೆ ರಸ್ತೆಗಳ ದುರಸ್ತಿ  ಕಾರ್ಯ ಪೂರ್ಣಗೊಳಿಸುವುದಾಗಿ ಯುಜಿಡಿ ಅಭಿಯಂತರರು ಭರವಸೆ ನೀಡಿದ್ದಾರೆಯಾದರು ನಿರಂತರ ಮಳೆಯಾಗುತ್ತಿರುವುದರಿಂದ ಈ ಭರವಸೆ ಈಡೇರುವುದು ಅಸಾಧ್ಯವೆನಿಸಿದೆ.

LEAVE A REPLY