ನಂಬಿಕೆ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವುದು ಸ್ವೀಕಾರಾರ್ಹವಲ್ಲ : ಪ್ರಧಾನಿ ‘ಮನ್ ಕೀ ಬಾತ್’

ಹೊಸದಿಲ್ಲಿ: “ಅಹಿಂಸಾ ಪರಮೋ ಧರ್ಮ” ನಮ್ಮ ಧ್ಯೇಯ. ನಂಬಿಕೆ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಅದು ಕೂಡದು. ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಪರಾಧಿಗಳಿಗೆ ಕಾನೂನು ಶಿಕ್ಷೆ ನೀಡುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ ನ 35 ನೇ ಸರಣಿಯಲ್ಲಿ ಮಾತನಾಡಿದ ಅವರು ಭಾರತವು ಬುದ್ಧ, ಮಹಾತ್ಮಗಾಂಧಿ ಹಾಗೂ ಸರ್ದಾರ್ ಪಟೇಲರು ಹುಟ್ಟಿದ ಭೂಮಿ. ಇಲ್ಲಿ ಯಾವುದೇ ರೂಪದ ಹಿಂಸಾಚಾರ ಸ್ವೀಕಾರಾರ್ಹವಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಈ ಬಾರಿಯ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಬಹುತೇಕ ಕಡೆಗಳಲ್ಲಿ ಆಚರಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ನರೇಂದ್ರ ಮೋದಿ ಎಲ್ಲಾ ಹಬ್ಬಗಳಂದು ಸ್ವಚ್ಛತೆಯನ್ನು ಕಾಪಾಡೋಣ. ಭಾರತ ವೈವಿಧ್ಯತೆಯ ನಾಡಾಗಿದ್ದು, ನಮ್ಮ ಎಲ್ಲಾ ಹಬ್ಬಗಳು ಪ್ರಕೃತಿಗೆ ಹಾಗೂ ರೈತ ಅಭಿವೃದ್ಧಿಗೆ ಹೊಂದಿಕೊಂಡಿವೆ ಎಂದರು. ಈ ಬಾರಿಯ ಗಾಂಧಿ ಜಯಂತಿಯಂದು ಶುಚಿತ್ವವನ್ನು ಗಮನದಲ್ಲಿಟ್ಟುಕೊಂಡು ಶುದ್ಧತೆಯನ್ನು ಕೇಂದ್ರೀಕರಿಸಲು  ಚಳುವಳಿಯನ್ನು ಪ್ರಾರಂಭಿಸೋಣ ಎಂದರು. ಇಂದು 2,30,000 ಗ್ರಾಮಗಳನ್ನು ಮಲವಿಸರ್ಜನೆ ಮುಕ್ತ ಗ್ರಾಮಗಳೆಂದು ಘೋಷಣೆ ಮಾಡಲಾಗಿದೆ. ಶೇ.67 ರಷ್ಟು ಜನತೆ ಇಂದು ಶೌಚಾಲಯಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಹಿಂದೆ ಇದರ ಶೇಕಡಾವಾರು 39 ರಷ್ಟಿತ್ತು. ನಮ್ಮ ನಾಗರೀಕರ ಮೇಲೆ ನಂಬಿಕೆ ಇಡುವುದು ಅತ್ಯಂತ ಪ್ರಮುಖವಾದದ್ದು ಎಂದರು. ಇಂದಿನ ಯುವಕರು ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ಶೀಘ್ರದಲ್ಲಿಯೇ ಕ್ರೀಡಾ ಸಚಿವಾಲಯ ’ಸ್ಪೋರ್ಟ್ಸ್ ಟ್ಯಾಲೆಂಟ್ ಸರ್ಚ್ ಪೋರ್ಟಲ್’ ಪ್ರಾರಂಭ ಮಾಡಲಿದೆ. ಫಿಫಾ ಅಂಡರ್-17 ವಿಶ್ವಕಪ್ ಆಡಲು ಭಾರತಕ್ಕೆ ಬರುತ್ತಿರುವ ಕ್ರೀಡಾಪಟುಗಳನ್ನು ನಾವು ಸ್ವಾಗತಿಸುತ್ತೇವೆ ಎಂದರು.
ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಗುಜರಾತ್, ಬಿಹಾರದ ನೆರೆ ಪರಿಸ್ಥಿತಿ ಬಗ್ಗೆ ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 5 ರ ಶಿಕ್ಷಕರ ದಿನಾಚರಣೆಗೂ ಶುಭ ಹಾರೈಸಿದ್ದಾರೆ.

LEAVE A REPLY