ಇದರ ಮೇಲಿಲ್ಲ ಸುಪ್ರೀಂ ತೀರ್ಪಿನ ಪರಿಣಾಮ: ಆಧಾರ್-ಪಾನ್ ಲಿಂಕ್‌ಗಿಲ್ಲ ತಡೆ

ಹೊಸದಿಲ್ಲಿ:ವೈಯಕ್ತಿಕ ಗೌಪ್ಯತೆ ಒಂದು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಸರ್ವಾನುಮತದಿಂದ ತೀರ್ಪು ನೀಡಿದ ಬಳಿಕ ಹಲವಾರು ಜನರು ಆಧಾರ್-ಪಾನ್ ಕಡ್ಡಾಯ ಲಿಂಕ್ ಮಾಡು ಆದಾಯ ತೆರಿಗೆ ಇಲಾಖೆ ನಿಯಮದ ಮೇಲೆ ಈ ತೀರ್ಪಿನ ಪರಿಣಾಮದ ಬಗ್ಗೆ ಚಿಂತಿತರಾಗಿದ್ದಾರೆ. ಕೇಂದ್ರ ಸರ್ಕಾರ ಕಡ್ಡಾಯ ಆಧಾರ್-ಪಾನ್ ಲಿಂಕ್ ಮಾಡಲು ಆದೇಶಿಸಿದ್ದು, ಆ.31ಕ್ಕೆ ಗಡುವು ವಿಸ್ತರಣೆ ಮಾಡಿತ್ತು. ಸುಪ್ರೀಂ ಕೋರ್ಟ್ ವೈಯಕ್ತಿಕ ಗೌಪ್ಯತೆ ಮೇಲೆ ನೀಡಿದ ಸರ್ವಾನುಮತದ ತೀರ್ಪಿಗೂ ಆದಾಯ ತೆರಿಗೆ ಕಾಯ್ದೆಯಲ್ಲಿ ಮಾಡಲಾದ ತಿದ್ದುಪಡಿಗೂ ಸಂಬಂಧವಿಲ್ಲ. ಹಾಗಾಗಿ ಆ.31 ಆಧಾರ್-ಪಾನ್ ಲಿಂಕ್ ಮಾಡಲು ಅಂತಿಮ ದಿನವಾಗಿದೆ.
ತೆರಿಗೆದಾರರು ನಿಗತ ಗಡುವಿನೊಳಗೆ ಪಾನ್ ಮತ್ತು ಆಧಾರ್ ಲಿಂಕ್ ಮಾಡಬೇಕು. ಈ ತಿಂಗಳು ಗಡುವು ಅಂತ್ಯವಾಗುತ್ತದೆ. ಗೌಪ್ಯತೆ ಮೇಲಿನ ಸುಪ್ರೀಂ ಕೋರ್ಟ್ ತೀರ್ಪು, ಅವಶ್ಯಕತೆಗಳ ಮೇಲೆ ಯಾವುದೇ ತಡೆಯನ್ನು ಒಡ್ಡುವುದಿಲ್ಲ ಎಂದು ಭಾರತೀಯ ವಿಶೇಷ ಗುರುತಿನ ಪ್ರಾಕಾರ (ಯುಐಡಿಎಐ) ಸಿಇಒ ಅಜಯ್ ಭೂಷಣ್ ಪಾಂಡೆ ಸ್ಪಷ್ಟಪಡಿಸಿದ್ದಾರೆ. ಆಧಾರ್ ಜೊತೆ ಪಾನ್ ಲಿಂಕ್ ಮಾಡುವುದು ಆದಾಯ ತೆರಿಗೆ ಕಾಯ್ದೆಯಡಿ ಮಾಡಿದ ತಿದ್ದುಪಡಿಯಾಗಿದೆ. ಹಾಗಾಗಿ ಈ ಕಾಯ್ದೆ ಮತ್ತು ಕಾನೂನು ಅಡಿಯಲ್ಲಿ ಲಿಂಕ್ ಪ್ರಕ್ರಿಯೆ ನಡೆಯುತ್ತದೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಪಾಂಡೆ ಹೇಳಿದ್ದಾರೆ.
ಸರ್ಕಾರ ನೀಡುವ ಸಬ್ಸಿಡಿಗಳಿಗೆ, ಕಲ್ಯಾಣ ಯೋಜನೆಗಳು ಮತ್ತು ಇತರ ಪ್ರಯೋಜನೆಗಳಿಗೆ ಆಧಾರ್ ಉಲ್ಲೇಖಿಸುವುದು ಅನಿವಾರ್ಯವಾಗಿದೆ. ಇವುಗಳಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ.

LEAVE A REPLY