ರಾಮ್ ರಹೀಮ್ ಸಿಂಗ್‌ಗೆ ನಾಳೆ ಜೈಲಿನಲ್ಲಿಯೇ ತೀರ್ಪು ಪ್ರಕಟಿಸಲಿರುವ ನ್ಯಾಯಾಧೀಶರು

ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ದೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ್ ರಹೀಮ್ ಸಿಂಗ್‌ಗೆ ನಾಳೆ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗುತ್ತಿದ್ದು, ಈ ನಡುವೆ ತೀರ್ಪು ನೀಡಿರುವ ಸಿಬಿಐ ವಿಶೇಷ ಕೋರ್ಟ್ ನ್ಯಾಯಮೂರ್ತಿ ಜಗದೀಪ್ ಸಿಂಗ್ ಅವರಿಗೆ ಝಡ್ ಪ್ಲಸ್ ಭದ್ರತೆ ಒದಗಿಸುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ.
ರಾಮ್ ರಹೀಮ್ ಸಿಂಗ್ ಇರುವ ರೋಹ್ಟಕ್ ಜೈಲಿಗೆ ನ್ಯಾಯಮೂರ್ತಿಗಳು ಮತ್ತು ನ್ಯಾಯಾಲಯದ ಸಿಬ್ಬಂದಿ ಖುದ್ದಾಗಿ ತೆರಳಿ ನಾಳೆ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದ್ದಾರೆ. ಇದಕ್ಕಾಗಿ ಹೈಕೋರ್ಟ್ ಸಿಬಿಐ ವಿಶೇಷ ಕೋರ್ಟ್ ನ್ಯಾಯಮೂರ್ತಿಗಳು ಮತ್ತು ಇಬ್ಬರು ಸಿಬ್ಬಂದಿ ಜೈಲಿಗೆ ಹೆಲಿಕಾಪ್ಟರ್ ಮೂಲಕ ತೆರಳಲು ಅಗತ್ಯ ವ್ಯವಸ್ಥೆ ಮಾಡುವಂತೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಅಲ್ಲದೆ ಜೈಲಿನಲ್ಲಿ ಅಗತ್ಯ ವ್ಯವಸ್ಥೆ ಮಾಡಬೇಕು, ವಕೀಲರಿಗೆ ಹಾಜರಾಗಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.
ಹೆಚ್ಚಿದ ಬಂದೋಬಸ್ತ್, ಭದ್ರತೆ
ನಾಳೆ ತೀರ್ಪು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ವಿವಿಧೆಡೆಗಳಲ್ಲಿ ಬಂದೋಬಸ್ತ್ ಇನ್ನಷ್ಟು ಹೆಚ್ಚಿಸಲಾಗಿದೆ. ಸಿಂಗ್ ದೋಷಿ ಎಂದು ತೀರ್ಪು ನೀಡಿದ ಬಳಿಕ ನಡೆದಿದ್ದ ಹಿಂಸಾಚಾರದಲ್ಲಿ ಇದುವರೆಗೂ 36 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಕಟ್ಟೆಚ್ಚರ ವಹಿಸಲಾಗಿದೆ.

LEAVE A REPLY